ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿ ಆಗಿದ್ದು, ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರ ನಡುವೆ ಪವನ್ ಕಲ್ಯಾಣ್ರ ಪುತ್ರನ ಚಿತ್ರರಂಗ ಎಂಟ್ರಿಗೆ ವೇದಿಕೆ ಸಜ್ಜಾಗುತ್ತಿದೆ. ಪವನ್ ಪುತ್ರನಿಗಾಗಿ ನಿರ್ದೇಶಕರೊಬ್ಬರು ಕಥೆ ರೆಡಿ ಮಾಡುತ್ತಿದ್ದಾರೆ. ರಾಜ್ಯವೊಂದರ ಉಪ ಮುಖ್ಯ ಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ಗೆ ಈಗ ಜವಾಬ್ದಾರಿ ಹೆಚ್ಚಿದ್ದು, ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಳ್ಳಲಿದ್ದಾರೆ. ಪವನ್ ಗೆದ್ದು ಡಿಸಿಎಂ ಆಗಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾದರೂ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದರ ನಡುವೆ ತಂದೆಯ ಕೊರತೆಯನ್ನು ನೀಗಿಸಲು ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಪವನ್ ಕಲ್ಯಾಣ್ರ ಎರಡನೇ ಪತ್ನಿ ರೇಣು ದೇಸಾಯಿ ಅವರ ಪುತ್ರ ಅಕಿರಾ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲ ತಿಂಗಳುಗಳಿಂದಲೂ ಈ ಕುರಿತು ಚರ್ಚೆ ಜಾರಿಯಲ್ಲಿದೆ. ಅಕಿರ ಸಿನಿಮಾ ರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಇದೀಗ ನಿರ್ದೇಶಕರೊಬ್ಬರು ಅಕಿರಾಗಾಗಿ ಕಥೆ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಹೇಳಿಕೊಂಡಿದ್ದಾರೆ.
ಪವನ್ ಕಲ್ಯಾಣ್ರ ಹಿಟ್ ಸಿನಿಮಾ ‘ಗಬ್ಬರ್ ಸಿಂಗ್’ ನಿರ್ದೇಶನ ಮಾಡಿದ್ದ ಹರೀಶ್ ಶಂಕರ್, ಪವನ್ರ ಪುತ್ರ ಅಕಿರಾಗಾಗಿ ಕಥೆ ರೆಡಿ ಮಾಡುತ್ತಿದ್ದಾರಂತೆ. ಆದಷ್ಟು ಬೇಗ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅದೇ ‘ಗಬ್ಬರ್ ಸಿಂಗ್’ ಸೇರಿದಂತೆ ಇನ್ನೂ ಕೆಲ ಪವನ್ ಕಲ್ಯಾಣ್ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಪವನ್ರ ಆಪ್ತ ಬಂಡ್ಲ ಗಣೇಶ್, ತಾವು ಅಕಿರಾ ಸಿನಿಮಾಕ್ಕೆ ಬಂಡವಾಳ ಹೂಡುವುದಾಗಿ ಘೋಷಣೆ ಮಾಡಿದ್ದರು. ಬಹುಷಃ ಅವರೇ ಅಕಿರಾರ ಸಿನಿಮಾಕ್ಕೆ ಬಂಡವಾಳ ಹೂಡುವ ಸಾಧ್ಯತೆ ಇದೆ.