ಪುಷ್ಪ.. ಪುಷ್ಪ.. ಪುಷ್ಪ.. ಸದ್ಯ ಭಾರತೀಯ ಚಿತ್ರರಂಗದಲ್ಲಿ ಐದೂ ಭಾಷೆಗಳಲ್ಲಿ ಸದ್ದು ಗದ್ದಲ ಮಾಡ್ತಿರೋ ಏಕೈಕ ಸಿನಿಮಾ ಪುಷ್ಪ. ಥಿಯೇಟ್ರಿಕಲ್ ರಿಲೀಸ್, ಸ್ಪೆಷಲ್ ಶೋಗಳು, ಟಿಕೆಟ್ ಪ್ರೈಸ್, ಬಾಕ್ಸ್ ಆಫೀಸ್ ರೆಕಾರ್ಡ್ಸ್, ಕಾಲ್ತುಳಿತದಿಂದ ಅದ ಸಾವು ಹೀಗೆ ಹತ್ತು ಹಲವು ಕಾರಣಗಳಿಂದ ಟ್ರೆಂಡಿಂಗ್ ನಲ್ಲಿದೆ ಪುಷ್ಪ-2 ಸಿನಿಮಾ. ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಅಂತಹ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿರೋ ಈ ಸಿನಿಮಾ ಎಲ್ಲೆಡೆ ಹಲ್ಚಲ್ ಎಬ್ಬಿಸಿದೆ.
ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್-2 ಸೇರಿದಂತೆ ರಾಜಮೌಳಿಯ ಬಾಹುಬಲಿ, ತ್ರಿಬಲ್ ಆರ್ ಚಿತ್ರಗಳನ್ನ ಕೂಡ ಫಸ್ಟ್ ಡೇ ಕೆಲಕ್ಷನ್ ನಲ್ಲಿ ಹಿಂದಿಕ್ಕಿರೋ ಪುಷ್ಪ-2 ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ನಾಗಾಲೋಟ ಮುಂದುವರೆಸಿದೆ. ಆದ್ರೆ ಈ ಸಿನಿಮಾ ಪ್ರೇಕ್ಷಕರ ಜೊತೆ ಜೊತೆಗೆ ಥಿಯೇಟರ್ ಮಂದಿಗೂ ದೊಡ್ಡ ತಲೆನೋವಾಗ್ತಿದೆ. ಅದಕ್ಕೆ ಕಾರಣ ಚಿತ್ರದ ರನ್ ಟೈಂ.
ಹೌದು.. ಬರೋಬ್ಬರಿ 3 ಗಂಟೆ 20 ನಿಮಿಷಗಳಷ್ಟು ದೊಡ್ಡದಾದಂತಹ ಸಿನಿಮಾ ಇದಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ ರನ್ ಟೈಂ ಕೂಡ ದೊಡ್ಡದಿತ್ತು. ಅದು ವರ್ಕೌಟ್ ಆದ ಹಿನ್ನೆಲೆ ಪುಷ್ಪ-2 ರನ್ ಟೈಂನ ಹೆಚ್ಚೂ ಕಡಿಮೆ ಒಂದು ಗಂಟೆಯಷ್ಟು ದೊಡ್ಡದಾಗಿಸಿದೆ ಪುಷ್ಪ ಟೀಂ. ಸಾಮಾನ್ಯವಾಗಿ ಸಿನಿಮಾಗಳ ರನ್ ಟೈಂ 2 ಗಂಟೆಯಿಂದ 2 ಗಂಟೆ 20 ನಿಮಿಷಗಳ ಕಾಲ ಇರಲಿದೆ. ಆದ್ರಿಲ್ಲಿ 3 ಗಂಟೆ 20 ನಿಮಿಷ ಆಗಿರೋದು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಶೋ ಟೈಮಿಂಗ್ಸ್ ಫಾಲೋ ಮಾಡೋಕೆ ಕಷ್ಟವಾಗ್ತಿದೆ. ಶೋ ಬಳಿಕ ಕ್ಲೀನಿಂಗ್ ಗೂ ಟೈಂ ಬೇಕಾಗಲಿದೆ. ಹಾಗಾಗಿ ಐದು ಶೋ ನಡೆಸೋ ಕಡೆ 4 ಶೋ ನಡೆಸ್ತಿವೆ ಕೆಲ ಥಿಯೇಟರ್ ಗಳು. ಥಿಯೇಟರ್ ಮ್ಯಾನೇಜರ್ ಗಳೇ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಈ ಕುರಿತು ತಮ್ಮ ಕಷ್ಟವನ್ನ ಹೇಳಿಕೊಂಡಿದ್ದಾರೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್