‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆದಾಗ ಅದು ಸೃಷ್ಟಿಸಿದ್ದ ದಾಖಲೆ, ಬಾಕ್ಸ್ ಆಫೀಸ್ ಅನ್ನು ಕಬ್ಜ ಮಾಡಿದ ರೀತಿಯಿಂದ ಕನ್ನಡ ಮಾತ್ರವಲ್ಲದೆ ಹಲವು ಚಿತ್ರರಂಗಗಳು ಮತ್ತೆ ಚಿಗುರಿ ನಿಂತವು. ಆ ರೀತಿಯ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ‘ಕೆಜಿಎಫ್ 2’ ಮಾಡಿತ್ತು. ‘ಕೆಜಿಎಫ್ 2’ ಸಿನಿಮಾ ಹಣ ಗಳಿಸಿದ ರೀತಿ ನೋಡಿ ಇನ್ಯಾವುದೇ ಸಿನಿಮಾಗಳು ಈ ದಾಖಲೆಯನ್ನು ಅಳಿಸಲಾಗುವುದಿಲ್ಲ ಎಂದೇ ಎಣಿಸಲಾಗಿತ್ತು. ಆದರೆ ಅದಾದ ಬಳಿಕ ಬಂದ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳು ‘ಕೆಜಿಎಫ್ 2’ ದಾಖಲೆಯನ್ನು ಮುರಿದವಾದರೂ ‘ಕೆಜಿಎಫ್ 2’ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಉಳಿದುಕೊಂಡಿದೆ. ಆದರೆ ಈಗ ಸಿನಿಮಾಗಳು ಹಣ ಮಾಡುವುದು ಅದೆಷ್ಟು ಸುಲಭವಾಗಿದೆಯೆಂದರೆ ಜನಪ್ರಿಯ ನಿರ್ಮಾಪಕರೊಬ್ಬರು ಹೇಳಿರುವಂತೆ ‘ಪುಷ್ಪ 2’ ಸಿನಿಮಾ ಫ್ಲಾಪ್ ಆದರೂ ಅದು ‘ಕೆಜಿಎಫ್ 2’ ಗಳಿಕೆಯನ್ನು ಹಿಂದಿಕ್ಕಲಿದೆಯಂತೆ!.
ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿರುವ ಬಹು ಕೋಟಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ‘ಕನಗುವ’ಗೆ ಬಂಡವಾಳ ಹೂಡಿರುವ ನಿರ್ಮಾಪಕ ಕೆಇ ಜ್ಞಾನವೇಲು ರಾಜ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಪುಷ್ಪ 2’ ಸಿನಿಮಾ ತಂಡದ ಮಾರುಕಟ್ಟೆ ಕೌಶಲ ಮತ್ತು ಆ ಸಿನಿಮಾಕ್ಕೆ ಇರುವ ಡಿಮ್ಯಾಂಡ್ ಹೇಗಿದೆಯೆಂದರೆ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆದರೂ ಸಹ ‘ಕೆಜಿಎಫ್ 2’ ಸಿನಿಮಾದ ದಾಖಲೆಯನ್ನು ಮುರಿದು ಹಾಕಲಿದೆ ಎಂದು ಜ್ಞಾನವೇಲು ಹೇಳಿದ್ದಾರೆ.