ಪ್ರಯಾಗ್ ರಾಜ್: ಸ್ಯಾಂಡಲ್ವುಡ್ನ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಅವರ ತಂಡವು ಮಹಾಕುಂಭಮೇಳದ ಪವಿತ್ರ ಸ್ಥಳಗಳ ದರ್ಶನ ಮಾಡಲು ಪ್ರಯಾಗ್ ರಾಜ್ ತಲುಪಿದ್ದು, ನಟ ರಾಜ್ ಬಿ ಶೆಟ್ಟಿಗೆ ಆರು ಮಂದಿ ಗೆಳೆಯರ ಬಳಗ ಸಾಥ್ ನೀಡಿದ್ದಾರೆ. ರಾಜ್ ಬಿ ಶೆಟ್ಟರೊಂದಿಗೆ ನಟಿ ಅನುಶ್ರೀ ಸೇರಿದಂತೆ ಏಳು ಜನರ ತಂಡವು ಜನವರಿ 29ರಂದು ಮಧ್ಯಾಹ್ನ ಕುಂಭಮೇಳ ತಾಣವನ್ನು ತಲುಪಿತು. ತಂಡವು ರಾತ್ರಿಯ ವೇಳೆಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿ, ಧಾರ್ಮಿಕ ಆಚರಣೆಗಳನ್ನು ನೆರವೇರಿಸಿತು.
ತಂಡದ ಸುರಕ್ಷಿತೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದ ಸುಳ್ಳು ವದಂತಿಗಳಿಗೆ ‘777 ಚಾರ್ಲಿ’ ಚಿತ್ರದ ನಿರ್ದೇಶಕ ಕಿರಣ್ ರಾಜ್ ಪ್ರತಿಕ್ರಿಯೆ ನೀಡಿದ್ದು, “ನಾವು ಎಲ್ಲರೂ ಸುರಕ್ಷಿತವಾಗಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ನೋಡಿದಂತೆ ಯಾವುದೇ ಆಘಾತಕಾರಿ ಪರಿಸ್ಥಿತಿ ಇಲ್ಲ. ಪ್ರಯಾಗ್ನಲ್ಲಿ ಎಲ್ಲವೂ ಶಾಂತಿಯುತವಾಗಿದೆ. ಇಲ್ಲಿ ಮೊನ್ನೆ ರಾತ್ರಿಯೇ ಪರಿಸ್ಥಿತಿ ಹತೋಟಿಗೆ ಬಂದಿದೆ. ನಾವು ಇಂದು ವಾರಾಣಸಿಗೆ ತೆರಳುತ್ತಿದ್ದೇವೆ. ಅಲ್ಲಿಂದ ಅಯೋಧ್ಯೆಗೆ ಭೇಟಿ ನೀಡಿ, ಎರಡು ದಿನಗಳಲ್ಲಿ ಬೆಂಗಳೂರು ಹಿಂದಿರುಗಲಿದ್ದೇವೆ” ಎಂದು ಗ್ಯಾರಂಟಿ ನ್ಯೂಸ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಜ್ ಬಿ ಶೆಟ್ಟಿ ಮತ್ತು ತಂಡವು ಇನ್ನೂ ಎರಡು ದಿನಗಳ ಕಾಲ ಉತ್ತರ ಭಾರತದ ಯಾತ್ರೆಯಲ್ಲಿರಲಿದ್ದು, ಕಾಶಿ (ವಾರಣಾಸಿ) ಮತ್ತು ಅಯೋಧ್ಯೆಯ ದರ್ಶನಕ್ಕಾಗಿ ತೆರಳಿದ್ದಾರೆ. ಈ ಯಾತ್ರೆಯನ್ನು ತಂಡದ ಸದಸ್ಯರು ಆತ್ಮೀಯ ಅನುಭವವಾಗಿ ವರ್ಣಿಸಿದ್ದಾರೆ. ಕಿರಣ್ ರಾಜ್ ಅವರು ತಮ್ಮ ತಂಡದ ಯೋಗಕ್ಷೇಮದ ಬಗ್ಗೆ ವಿಚಾರಿಸಿದ ಗ್ಯಾರಂಟಿ ನ್ಯೂಸ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc