ಇತ್ತೀಚೆಗಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ರೀ-ರಿಲೀಸ್ ಆಗುತ್ತಿದೆ. ಇದರಲ್ಲಿ ಸ್ಟಾರ್ ನಟರ ಚಿತ್ರಗಳೂ ಸೇರಿವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಸಿನಿಮಾಗಳಿಲ್ಲದೆ ಥಿಯೇಟರ್ ಗಳು ಖಾಲಿ ಹೊಡೆಯುತ್ತಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ʼಜಾಕಿʼ, ʼಅಂಜನಿ ಪುತ್ರʼ, ʼಪವರ್ʼ ಉಪೇಂದ್ರ ಅವರ ʼಎʼ, ದರ್ಶನ್ ಅವರ ʼರಾಬರ್ಟ್ʼ, ʼಶಾಸ್ತ್ರಿʼ ಚಿತ್ರಗಳು ರೀ- ರಿಲೀಸ್ ಆಗಿತ್ತು. ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಕೃಷ್ಣ ನೀಬೇಗನೆ ಬಾರೋ’ ಚಿತ್ರ ಕೂಡ ಇತ್ತೀಚೆಗೆ ರೀ ರಿಲೀಸ್ ಆಗಿತ್ತು.
ಇದೀಗ ರೀ- ರಿಲೀಸ್ ಸಾಲಿಗೆ ಯಶ್ ಅವರ ಸಿನಿಮಾ ಕೂಡ ಸೇರುತ್ತಿದೆ. ʼಕೆಜಿಎಫ್ʼ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸ್ಟಾರ್ ಆದ ರಾಕಿಂಗ್ ಸ್ಟಾರ್ ಮುಂದೆ ʼಟಾಕ್ಸಿಕ್ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಯಶ್ ಅವರ ‘ಮಿ. & ಮಿ. ರಾಮಾಚಾರಿ’ ರೀ- ರಿಲೀಸ್ ಆಗಿತ್ತು. ಯಶ್ ಅವರ ವೃತ್ತಿ ಬದುಕಿಗೆ ʼಕೆಜಿಎಫ್ʼಗಿಂತ ಮೊದಲು ದೊಡ್ಡ ತಿರುವು ಕೊಟ್ಟ ʼರಾಜಾಹುಲಿʼ ಚಿತ್ರ ಇದೇ ತಿಂಗಳು ರೀ-ರಿಲೀಸ್ ಆಗುತ್ತಿದೆ. ಗುರು ದೇಶಪಾಂಡೆ ನಿರ್ದೇಶನದಲ್ಲಿ ಬಂದ ʼರಾಜಾಹುಲಿʼ ತಮಿಳಿನ ‘ಸುಂದರ ಪಾಂಡಿಯನ್’ ರಿಮೇಕ್ ಆಗಿತ್ತು. ಕನ್ನಡಕ್ಕೆ ಬದಲಾವಣೆ ಮಾಡಿಕೊಂಡು ತೆರೆಗೆ ತರಲಾಗಿತ್ತು. ಚಿತ್ರದಲ್ಲಿ ಮೇಘನಾ ರಾಜ್ ಯಶ್ ಗೆ ನಾಯಕಿಯಾಗಿ ನಟಿಸಿದ್ದರು. ಚಿತ್ರ ರಾಜ್ಯದ ಅನೇಕ ಥಿಯೇಟರ್ನಲ್ಲಿ ಸಿನಿಮಾ 50 ದಿನ ಪ್ರದರ್ಶನ ಕಂಡಿತ್ತು. ಮೊದಲ ವಾರದಲ್ಲೇ 7 ಕೋಟಿ ರೂ. ಗಳಿಕೆ ಕಂಡಿತ್ತು. ಚಿತ್ರದ ಕಥೆ, ಸಂಭಾಷಣೆ, ಹಾಸ್ಯ, ಮಾಸ್ ದೃಶ್ಯ ಸಿನಿಮಂದಿಗೆ ಇಷ್ಟವಾಗಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾ ಮತ್ತೆ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ಇದೇ ಜುಲೈ 26ರಂದು ʼರಾಜಾಹುಲಿʼ ರೀ- ರಿಲೀಸ್ ಆಗುತ್ತಿದೆ. ಭೂಮಿ ಫಿಲಂಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಲು ಮುಂದಾಗಿದೆ. ಈ ವಿಚಾರವನ್ನು ಕೇಳಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಖುಷ್ ಆಗಿದ್ದಾರೆ.