ಜೈಲೂಟ ಸೇರುತ್ತಿಲ್ಲ ಅಂತ ಮನೆ ಊಟಕ್ಕೆ ಅವಕಾಶ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದ ನಟ ದರ್ಶನ್ಗೆ ಹಿನ್ನಡೆ ಆಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ಸದ್ಯಕ್ಕೆ ಜೈಲೂಟವೇ ಗತಿಯಾಗಿದೆ. ಹೈಕೋರ್ಟ್ನಲ್ಲಿ ನಟ ದರ್ಶನ್ ಪರ ಹಿರಿಯ ವಕೀಲ ಫಣೀಂದ್ರ ವಾದ ಮಂಡಿಸಿದ್ರು. ಜೈಲಿನ ಆಹಾರ ದರ್ಶನ್ಗೆ ಸೂಕ್ತ ರೀತಿಯಲ್ಲಿ ಜೀರ್ಣವಾಗುತ್ತಿಲ್ಲ. ಕೆಲವು ದಿನಗಳಿಂದ ಅತಿಸಾರದಿಂದ ಬಳಲುತ್ತಿದ್ದಾರೆ. ಜತೆಗೆ ದರ್ಶನ್ ತೂಕವೂ ಇಳಿದಿದ್ದು, ಕಾರಾಗೃಹದಲ್ಲಿ ವಿತರಿಸುತ್ತಿರುವ ಆಹಾರ ಸೇವಿಸಲು ಆಗುತ್ತಿಲ್ಲ. ಹೀಗಾಗಿ ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕೆಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ಈ ಬಗ್ಗೆ ಪ್ರತಿವಾದಿಗಳಿಗೆ ಉತ್ತರಿಸುವಂತೆ ನೋಟಿಸ್ ನೀಡಿದ ಹೈಕೋರ್ಟ್ ನ್ಯಾಯಾಧೀಶರು ಜುಲೈ 18ಕ್ಕೆ ವಿಚಾರಣೆ ಮುಂದೂಡಿ ಆದೇಶ ನೀಡಿದ್ದಾರೆ. ಹೀಗಾಗಿ ಕೋರ್ಟ್ ಮುಂದಿನ ಆದೇಶ ನೀಡೋವರೆಗೂ ನಟ ದರ್ಶನ್ಗೆ ಜೈಲೂಟವೇ ಗತಿಯಾಗಿದೆ.
ಕರ್ನಾಟಕ ಬಂದೀಖಾನೆ ಕಾಯ್ದೆ 1963 ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಹೊರಗಡೆಯಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಜತೆಗೆ ಅರ್ಜಿದಾರರು ಅಪರಾಧಿಯಾಗಿಲ್ಲ. ಆದ್ದರಿಂದ ಊಟ, ಹಾಸಿಗೆ ಪುಸ್ತಕಗಳು ಮತ್ತು ಸುದ್ದಿಪತ್ರಿಕೆಗಳು ಮನೆಯಿಂದ ತರಿಸಿಕೊಂಡಲ್ಲಿ ಸರಕಾರದ ಖಜಾನೆಗೆ ಆಗುವ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೆ ಅರ್ಜಿದಾರರಿಗೆ ಮನೆ ಆಹಾರ ನೀಡದಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯವಾಗಿದ್ದು ಸಂವಿಧಾನದ ಪರಿಚ್ಛೇದ 21ರ ಬದುಕುವ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದು ರಿಟ್ ಅರ್ಜಿಯಲ್ಲಿ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು.