ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಇಂದು ಅಂತ್ಯವಾಗಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಆರೋಪಿಗಳನ್ನು ಜೈಲಾಧಿಕಾರಿಗಳು ವಿಚಾರಣೆಗೆ ಹಾಜರು ಪಡಿಸಲಿದ್ದಾರೆ. ದರ್ಶನ್ ಅವರನ್ನು ಬಂಧಿಸಿ ತಿಂಗಳಾಗುತ್ತಾ ಬಂದಿದೆ. ಮೊದಲು ಕೆಲವು ದಿನ ದರ್ಶನ್ ಅವರನ್ನು ತೀವ್ರವಾಗಿ ವಿಚಾರಣೆ ಮಾಡಲಾಯಿತು. ಆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇಂದು ದರ್ಶನ್ ಪಾಲಿಗೆ ಮಹತ್ವದ ದಿನ ಆಗಿದ್ದು, ಅವರು ಜೈಲಿನಿಂದ ಹೊರ ಬರುತ್ತಾರೋ ಅಥವಾ ಜೈಲಿನಲ್ಲಿ ಉಳಿಯುತ್ತಾರೋ ಎಂಬುದು ತಿಳಿಯಲಿದೆ.
ದರ್ಶನ್ ಸ್ಯಾಂಡಲ್ವುಡ್ನ ಸ್ಟಾರ್ ಹೀರೋ. ಕರುನಾಡಿನ ಮೂಲೆ ಮೂಲೆಯಲ್ಲೂ ಇವರ ಫ್ಯಾನ್ಸ್ ಇದ್ದಾರೆ. ಹೀಗಾಗಿಯೇ ಈ ಕೊಲೆ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಕಾರಣದಿಂದಲೇ ದರ್ಶನ್ ಅವರನ್ನು ಕೋರ್ಟ್ ಎದುರು ಹಾಜರುಪಡಿಸುವಾಗ ಫ್ಯಾನ್ಸ್ ನೆರೆಯುತ್ತಿದ್ದಾರೆ. ಮಾಧ್ಯಮದವರು ಮುತ್ತಿಕೊಳ್ಳುತ್ತಿದ್ದಾರೆ. ಈ ತೊಂದರೆಯೇ ಬೇಡ ಎಂಬ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಅವರ ವಿಚಾರಣೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಕೆಲವು ಮೂಲಗಳ ಪ್ರಕಾರ 14 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅಂಡ್ ಗ್ಯಾಂಗ್ಗೆ ಮತ್ತೆ ಜೈಲು ಸೇರುವುದು ಖಚಿತ ಎನ್ನಲಾಗಿದೆ. ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಪರ ವಕೀಲರು ಜಾಮೀನು ಅರ್ಜಿಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಪೋಲೀಸರು ಚಾರ್ಜ್ ಶೀಟ್ನಲ್ಲಿ ಯಾವೆಲ್ಲಾ ಅಂಶಗಳನ್ನ ಉಲ್ಲೇಖ ಮಾಡುತ್ತಾರೆ ಅನ್ನೋದನ್ನ ನೋಡಿಕೊಂಡು ಆ ಅಂಶಗಳ ಮೇಲೆ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಪ್ಲಾನ್ ಮಾಡಲಿದ್ದಾರೆ ಎನ್ನಲಾಗಿದೆ. ವ್ಯಕ್ತಿ ಬಂದನವಾದ 90 ದಿನಗಳಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ಪೊಲೀಸರಿಗೆ ಅವಕಾಶವಿದೆ. ಅಲ್ಲಿಯವರೆಗೂ ನಟ ದರ್ಶನ್ ಹಾಗೂ ಗ್ಯಾಂಗ್ಗೆ ನ್ಯಾಯಾಂಗ ಬಂಧನವೇ ಗಟ್ಟಿಯಾಗಲಿದೆ. ಸದ್ಯ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.
ಈ ಬಗ್ಗೆ ಪವಿತ್ರಾ ಗೌಡ ಪರ ವಕೀಲರು ಮಾಹಿತಿ ನೀಡಿದ್ದಾರೆ. ‘ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಆರೋಪಿಗಳು ಹಾಜರಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ’ ಎಂದಿದ್ದಾರೆ. ಈ ಪ್ರಕರಣದಲ್ಲಿ ಸದ್ಯ ತನಿಖೆ ನಡೆಯುತ್ತಿದೆ. ದರ್ಶನ್ ಅವರು ಪ್ರಭಾವಿ ವ್ಯಕ್ತಿ. ಅವರು ಹೊರ ಬಂದರೆ ಸಾಕ್ಷಿ ನಾಶ ಆಗಬಹುದು. ಹೀಗಾಗಿ, ಅವರಿಗೆ ಜಾಮೀನು ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.