- ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ ಡಿಎನ್ಎ ಪರೀಕ್ಷೆ
- ಆರೋಪಿಗಳ ರಕ್ತ, ಕೂದಲಿನ ಮಾದರಿ ಸಂಗ್ರಹ
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಘಟನೆ ನಡೆದ ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ. ಈ ಮೂಲಕ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಇಂದು ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳ ಡಿಎನ್ಎ ಟೆಸ್ಟ್ ಮಾಡಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಡಿಎನ್ಎ ಪರೀಕ್ಷೆ ಮಾಡಲಾಗಿದೆ. ಒಟ್ಟು 9 ಆರೋಪಿಗಳ ಸ್ಯಾಂಪಲ್ಸ್ ಪಡೆದುಕೊಳ್ಳಲಾಗಿದೆ. ಆರೋಪಿಗಳ ರಕ್ತ ಮತ್ತು ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ರೇಣುಕಾ ಸ್ವಾಮಿ ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಕೂದಲು ಹಾಗೂ ರಕ್ತದ ಮಾದರಿಯ ಜೊತೆ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೂದಲು, ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನುಎಫ್ಎಸ್ಎಲ್ಗೆ (ವಿಧಿ ವಿಜ್ಞಾನ ಪ್ರಯೋಗಾಲಯ) ಕಳುಹಿಸಲಾಗುತ್ತದೆ. ಒಂದು ವೇಳೆ, ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಆರೋಪಿಗಳ ಸ್ಯಾಂಪಲ್ ಜೊತೆ ಮ್ಯಾಚ್ ಆದರೆ ಅದು ಪ್ರಮುಖ ಸಾಕ್ಷ್ಯ ಆಗಲಿದೆ. ಆ ಕಾರಣದಿಂದ 9 ಆರೋಪಿಗಳ ಡಿಎನ್ಎ ಪರೀಕ್ಷೆ ಮಾಡಿಸಲಾಗಿದೆ.