ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿ ಪವಿತ್ರಾ ಗೌಡ ಗೆಳತಿ ಸಮತಾ ಅವರನ್ನು ತನಿಖಾಧಿಕಾರಿ ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ನೋಟಿಸ್ ಹಿನ್ನೆಲೆ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ಕುಮಾರ್ ಎದುರು ಸಮತಾ ಹಾಜರಾಗಿದರು. ಪ್ರಕರಣ ಸಂಬಂಧ, ಆರೋಪಿ ಧನರಾಜ್ಗೆ ಹಣ ನೀಡಿದ ಬಗ್ಗೆ ತನಿಖಾಧಿಕಾರಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಘಟನೆ ಮಾರನೇ ದಿನ ಸಮತಾ, ಪವಿತ್ರಾ ಗೌಡ ಮನೆಗೆ ಭೇಟಿ ನೀಡಿದರು. ಅಂತೆಯೇ ಆರೋಪಿ ಧನರಾಜ್ಗೆ ಫೋನ್ ಪೇ ಮುಖಾಂತರ 3000ರು. ಹಾಕಿದ್ದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯು ಸಮತಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಪವಿತ್ರಾಗೌಡ ನಿಮಗೆ ಎಷ್ಟು ವರ್ಷದಿಂದ ಪರಿಚಯ? ರೇಣುಕಾಸ್ವಾಮಿ ಕೊಲೆ ಬಗ್ಗೆ ನಿಮಗೆ ಗೊತ್ತಿತ್ತೇ? ಕೊಲೆ ಘಟನೆ ದಿನ ಆರೋಪಿ ಧನರಾಜ್ಗೆ 3 ಸಾವಿರ ಫೋನ್ ಪೇ ಮುಖಾಂತರ ವರ್ಗಾಯಿಸಿದ್ದು ಏಕೆ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಲಾಗಿದೆ.
ಪವಿತ್ರಾಗೌಡ ನನ್ನ ಆತ್ಮೀಯ ಗೆಳತಿ. ಕೆಲ ವರ್ಷಗಳಿಂದ ಆರೋಪಿ ಧನರಾಜ್ ತಮಗೆ ಪರಿಚಯವಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಅವರು ನನ್ನಿಂದ ಹಣ ಪಡೆದು ವಾಪಸ್ ನೀಡಿದ್ದರು. ಅದರಂತೆ ಅಂದು ತುರ್ತಿದೆ ಎಂದು ನನ್ನಿಂದ ಮೂರು ಸಾವಿರ ರುಪಾಯಿ ಪಡೆದಿದ್ದರು ಎಂದು ಸಮತಾ ತನಿಖಾಧಿಕಾರಿ ಎದುರು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಆರೋಪಿ ಧನರಾಜ್ ಮತ್ತು ತಮ್ಮ ನಡುವೆ ನಡೆದಿರುವ ಹಣ ವರ್ಗಾವಣೆ ಸಂಬಂಧ ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅಗತ್ಯ ಬಿದ್ದಲ್ಲಿ ಮತ್ತೆ ವಿಚಾರಣೆಗೆ ಕರೆಯುವುದಾಗಿ ತನಿಖಾಧಿಕಾರಿ ಸಮತಾಗೆ ಹೇಳಿ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.