ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾ. ಸಿನಿಮಾದ ಚಿತ್ರೀಕರಣವನ್ನು ಗುಟ್ಟಾಗಿಯೇ ಚಿತ್ರತಂಡ ನಡೆಸುತ್ತಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ಡೇಟ್ ಆಗಲಿ, ಶೂಟಿಂಗ್ ಸ್ಪಾಟ್ ಚಿತ್ರಗಳಾಗಲಿ ಹೊರಬಂದಿಲ್ಲ. ಆದರೆ ಇದೀಗ ಏಕಾ ಏಕಿ ‘ಟಾಕ್ಸಿಕ್’ ಸಿನಿಮಾ ತಂಡದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ‘ಟಾಕ್ಸಿಕ್’ ಸಿನಿಮಾಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್ನಿಂದ ಸಮಸ್ಯೆ ಎದುರಾಗಿದೆ.
ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ ಸುಮಾರು 20 ಎಕರೆ ಜಾಗದಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಆದರೆ ಈ ಸೆಟ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ.ಬಾಲಾಜಿ ನಾಯ್ಡುರಿಂದ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಅಕ್ರಮವಾಗಿ ನಿರ್ಮಿಸಲಾಗಿರುವ ಈ ಸೆಟ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅರ್ಜಿ ವಿಚಾರಣೆಗೆ ಅರ್ಹವೆಂದು ಪರಿಗಣಿಸಿರುವ ಹೈಕೋರ್ಟ್ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ.