ಒಂದಷ್ಟು ಕಾರಣಗಳಿಂದ ‘45’ ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿದ್ದಾರೆ. ಮೊದಲಿನಿಂದಲೂ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ತಂಡದಿಂದ ಈಗೊಂದು ಅಪ್ಡೇಟ್ ಸಿಕ್ಕಿದೆ. ಏನದು? ಶೂಟಿಂಗ್ ಕಂಪ್ಲೀಟ್. ‘45’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
ಅದ್ದೂರಿ ಬಜೆಟ್ನಲ್ಲಿ ‘45’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಅದ್ದೂರಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಚಿತ್ರೀಕರಣ ಮುಗಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಅದರಲ್ಲಿ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ರಮೇಶ್ ರೆಡ್ಡಿ ಮುಂತಾದವರು ಭಾಗಿ ಆಗಿದ್ದರು. ಈ ವೇಳೆ ಶಿವರಾಜ್ಕುಮಾರ್ ಅವರು ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡಿದರು.
‘ಈ ಸಿನಿಮಾದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ. ನಾವು ಮೂವರು ಅಭಿನಯಿಸಿದ್ದೇವೆ. ಇಲ್ಲಿ ನಾವೆಲ್ಲರೂ ಒಂದೇ. ಉಪೇಂದ್ರ ಅವರ ಜೊತೆ ಅಭಿನಯಿಸಲು ನಾನು ಯಾವಾಗ್ಲೂ ರೆಡಿ. ರಾಜ್ ಬಿ. ಶೆಟ್ಟಿ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಕ್ಕೂ ಖುಷಿ ಆಗಿದೆ. ಇದು ಅರ್ಜುನ್ ಜನ್ಯ ಅವರ ನಿರ್ದೇಶನದ ಮೊದಲ ಸಿನಿಮಾ ಎಂದು ಹೇಳೋಕೆ ಆಗಲ್ಲ. ಅಷ್ಟು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ರಮೇಶ್ ರೆಡ್ಡಿ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನ ಚೆನ್ನಾಗಿದೆ. ದೇಶವೇ ಮುಚ್ಚುವಂತಹ ಸಿನಿಮಾ ಇದಾಗಲಿದೆ’ ಎಂದಿದ್ದಾರೆ ಶಿವಣ್ಣ.
ಅರ್ಜುನ್ ಜನ್ಯ ಬಗ್ಗೆ ಉಪೇಂದ್ರ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ಕಥೆಯನ್ನು ಆ್ಯನಿಮೇಷನ್ ಮೂಲಕ ಹೇಳೋದನ್ನು ನಾನು ಹಾಲಿವುಡ್ನಲ್ಲಿ ಕೇಳಿದ್ದೆ. ಆದರೆ ಅರ್ಜುನ್ ಜನ್ಯ ಅವರು ಕನ್ನಡದಲ್ಲೇ ಇದನ್ನು ಮಾಡಿ ತೋರಿಸಿದ್ದಾರೆ. ಆ್ಯನಿಮೇಷನ್ನಲ್ಲಿ ಹೇಳಿದ ರೀತಿಯಲ್ಲೇ ಸಿನಿಮಾ ಮಾಡಿದ್ದಾರೆ. ಅವರ ಆಲೋಚನೆಗೆ ನಿರ್ಮಾಪಕ ರಮೇಶ್ ರೆಡ್ಡಿ ಬೆಂಬಲ ನೀಡಿದ್ದಾರೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಆಗಲಿದೆ’ ಎಂದರು ಉಪೇಂದ್ರ.
‘ನಾನು ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರ ಅಭಿಮಾನಿ. ಈಗ ಅವರ ಜೊತೆ ಅಭಿನಯಿಸಿದ್ದು ನನ್ನ ಪಾಲಿನ ಭಾಗ್ಯ. ಕನ್ನಡಿಗರು ಹೆಮ್ಮೆಪಡುವಂತಹ ಸಿನಿಮಾ ಇದಾಗಲಿದೆ. ಈ ಚಿತ್ರದಲ್ಲಿ ನಟಿಸಿದ್ದಕ್ಕೆ ನನಗೆ ಹೆಮ್ಮ ಇದೆ’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ. ‘ಈ ಸಿನಿಮಾ ಒಂದು ದೇವಾಲಯದ. ಇದರಲ್ಲಿ ಶಿವರಾಜ್ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅವರು ಬ್ರಹ್ಮ-ವಿಷ್ಣು-ಮಹೇಶ್ವರ ಇದ್ದಂತೆ. ರಮೇಶ್ ರೆಡ್ಡಿ ಈ ದೇವಸ್ಥಾನ ಕಟ್ಟಿದ್ದಾರೆ’ ಎಂದು ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.