ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಮ್ಮ ಆನಾರೋಗ್ಯದ ಚಿಕಿತ್ಸೆಗಾಗಿ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸಿನಿಮಾ ಮೇಲಿನ ಒಲವು, ಪರಿಶ್ರಮ ಅಮೋಘ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟ ತಮ್ಮ ಎಲ್ಲಾ ಬದ್ಧತೆಗಳನ್ನು ಪೂರ್ಣಗೊಳಿಸಿ ವಿದೇಶಕ್ಕೆ ತೆರಳುತ್ತಿದ್ದಾರೆ.
ಅನಾರೋಗ್ಯದ ಹಿನ್ನಲೆ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಸರ್ಜರಿ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಇಂದು ರಾತ್ರಿ 8.30 ರ ವೇಳೆಗೆ ವಿಮಾನ ಏರಲಿದ್ದಾರೆ. ಈ ಹಿನ್ನೆಲೆ ನಟ ಶಿವರಾಜ್ಕುಮಾರ್ ನಿವಾಸಕ್ಕೆ ನಟ ಕಿಚ್ಚ ಸುದೀಪ್, ಬಿಸಿ ಪಾಟೀಲ್ ಮತ್ತಿತರರು ಇಂದು ಭೇಟಿ ನೀಡಿ ಶಿವಣ್ಣ ಅವರ ಕುಶಲೋಪರಿ ವಿಚಾರಿಸಿದ್ದಾರೆ. ಶಿವರಾಜ್ಕುಮಾರ್ ಬಾಮೈದ ಮಧು ಬಂಗಾರಪ್ಪ ಕೂಡ ಅಮೆರಿಕಕ್ಕೆ ತೆರಳಿದ್ದಾರೆ.