ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಅಭಿಮಾನಿಗಳ ಮನ ಗೆದ್ದಿದೆ. ಈಗ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಟ್ರೇಲರ್ ನೋಡಿದಾಗ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಕಾಡಿನೊಳಗೆ ನಡೆಯುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎಂದು ತಿಳಿಯುತ್ತದೆ. ಕಾಡಿನ ಟ್ರೇಲರ್ ಗೆ ನಾಡಿನ ಜನರು ಫಿದಾ ಆಗಿದ್ದಾರೆ. ಬಹು ನಿರೀಕ್ಷಿತ ಈ ಮಲ್ಟಿಸ್ಟಾರರ್ ಚಿತ್ರ ಜನವರಿ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಎನ್ ಎಂ ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ. ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ.
ಸಂಭಾಷಣೆ ಕೂಡ ಸತ್ಯಶೌರ್ಯ ಸಾಗರ್ ಅವರದೆ. ಧರ್ಮವಿಶ್ ಸಂಗೀತ ನಿರ್ದೇಶನ, ಆನಂದ್ ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರದ ತಾರಾಬಳಗದಲ್ಲಿ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ಕುಮಾರ್ ಮುಂತಾದವರಿದ್ದಾರೆ.