ಡಿಬಾಸ್ ದರ್ಶನ್ ಪ್ರಕರಣ ದಿನದಿಂದ ದಿನಕ್ಕೆ ಹಲವು ಕಾರಣಗಳಿಂದ ಸುದ್ದಿಯಾಗ್ತಾನೇ ಇದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಏನಾಗುತ್ತೋ ಅಂತಿದ್ರೆ, ಜನ ಸಾಮಾನ್ಯರು ಇಷ್ಟೆಲ್ಲಾ ಆದ್ಮೇಲೂ ಇವ್ರಿಗೆ ಶಿಕ್ಷೆ ಆಗದೇ ಇದ್ರೆ ಹೇಗೆ ಅಂತ ಕೇಳ್ತಿದ್ದಾರೆ. ಆದ್ರೆ ಇದೇ ಸಂದರ್ಭದ ಅಡ್ವಾಂಟೇಜ್ ತೆಗೆದುಕೊಳ್ಳಲು, ಸ್ಯಾಂಡಲ್ವುಡ್ನ ವಿತರಕರು ನಟ ದರ್ಶನ್ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡೋಕೆ ನಾ ಮುಂದು ತಾ ಮುಂದು ಅಂತಿದ್ದಾರೆ. ಈಗಾಗ್ಲೆ ದರ್ಶನ್ ಅಭಿನಯದ ಶಾಸ್ತ್ರಿ ಸಿನಿಮಾ ರೀ-ರಿಲೀಸ್ ಆಗಿ ಜನರನ್ನ ಥಿಯೇಟರ್ ಕಡೆಗೆ ನುಗ್ಗಿ ಬರುವಂತೆ ಮಾಡಿತ್ತು. ಒಳ್ಳೆ ಹಣ ಕೂಡ ಬಾಚಿಕೊಂಡಿತ್ತು.
ಶಾಸ್ತ್ರಿ ಸಿನಿಮಾದ ಹಿಂದೆಯೇ ದರ್ಶನ್ ಅಭಿನಯದ, ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ನಿರ್ದೇಶನದ ಬ್ಲಾಕ್ಬಸ್ಟರ್ ಕರಿಯಾ ಈ ವಾರ ತೆರೆಗೆ ಬರ್ತಾ ಇದೆ. ಕರಿಯಾ ಸಿನಿಮಾದ ಕ್ರೇಜ್ ಹೇಗಿದೆ ಅಂದ್ರೆ ರೀ-ರಿಲೀಸ್ ಆಗ್ತಾ ಇರೋ ಸಿನಿಮಾದ ಫಸ್ಟ್ ಡೇ ಟಿಕೆಟ್ಸ್ ಈಗಾಗ್ಲೆ ಸೋಲ್ಡ್ ಔಟ್ ಆಗಿದೆ. ಕರಿಯ ಸಿನಿಮಾ 7.1 ಡಾಲ್ಬಿ ಹಾಗೂ ಡಿಐ ಜೊತೆಗೆ ರಿಲೀಸ್ ಆಗ್ತಾ ಇದ್ದು ನೋಡುಗರಿಗೆ ಹೊಸ ಕರಿಯನ ಪರಿಚಯ ಆಗಲಿದೆ. ಈಗ ಕರಿಯ ಸಿನಿಮಾದ ಬಳಿಕ ದರ್ಶನ್ ಅಭಿನಯದ ಮತ್ತೊಂದು ಸಿನಿಮಾ ಕೂಡ ರಿಲೀಸ್ ಆಗೋಕೆ ರೆಡಿಯಾಗಿದೆ.
ಕರಿಯಾ ಸಿನಿಮಾವನ್ನು ಮರುಬಿಡುಗಡೆ ಮಾಡಿರೋ ರಾಘವ್ ಅವ್ರೇ ಈಗ ಕಲಾಸಿಪಾಳ್ಯ ಸಿನಿಮಾ ಮತ್ತೆ ತೆರೆಗೆ ತರೋ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಾಗೆ, ಈಗಾಗ್ಲೆ ಕಲಾಸಿಪಾಳ್ಯ ಸಿನಿಮಾದ ನಿರ್ಮಾಪಕ ಕೋಟಿ ನಿರ್ಮಾಪಕ ರಾಮು ಪತ್ನಿ ಮಾಲಶ್ರೀ ಅವ್ರನ್ನು ಭೇಟಿ ಮಾಡಿದ್ದು, ನಟಿ ಮಾಲಾಶ್ರೀ ಕೂಡ ಇದಕ್ಕೆ ಓಕೆ ಅಂದಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಶೀಘ್ರದಲ್ಲೇ 20 ವರ್ಷದ ಹಿಂದೆ ತೆರೆಕಂಡಿದ್ದ ಕಲಾಸಿಪಾಳ್ಯ ಕೂಡ ಥಿಯೇಟರ್ನಲ್ಲಿ ಮತ್ತೆ ರಾರಾಜಿಸಲಿದೆ. ಈ ಕುರಿತು ಗ್ಯಾರಂಟಿ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ ದರ್ಶನ್ ಅಭಿಮಾನಿಯೂ ಆಗಿರೋ ವಿತರಕರು.