ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗೆ ತಂಡಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶಾಕ್ ನೀಡಿದ್ದಾರೆ. ಟಾಕ್ಸಿಕ್ ಚಿತ್ರತಂಡದ ವಿರುದ್ಧ ಕೇಸ್ ದಾಖಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸ್ವತಃ ಸಚಿವರೇ ಸೂಚನೆ ನೀಡಿದ್ದಾರೆ.
ಹಿಂದೂಸ್ತಾನ್ ಮಷಿನ್ ಟೂಲ್ಸ್ (ಹೆಚ್ಎಂಟಿ) ವತಿಯಿಂದ ಕೆನರಾ ಬ್ಯಾಂಕ್ಗೆ ಮಾರಾಟ ಮಾಡಲಾಗಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ಟಾಕ್ಸಿಕ್ ಸಿನಿಮಾದ ಸೆಟ್ ಹಾಕುವುದಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಈ ಅರಣ್ಯ ಭೂಮಿಯಲ್ಲಿದ್ದ ಮರಗಳ ನಾಶವನ್ನು ಟಾಕ್ಸಿಕ್ ಸಿನಿಮಾ ತಂಡವು ಸೆಟ್ ಹಾಕುವುದಕ್ಕಾಗಿ ಕಡಿದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಪೀಣ್ಯದ ಎಚ್ಎಂಟಿ ಪ್ಲಾಂಟೇಷನ್ನಲ್ಲಿ ಮರ ಕಡಿದ ಅರೋಪಕ್ಕೆ ಟಾಕ್ಸಿಕ್ ಚಿತ್ರತಂಡ ಗುರಿಯಾಗಿದೆ.
ಹಲವು ದಿನಗಳಿಂದ ಪೀಣ್ಯದ ಬಳಿಯ ಹೆಚ್ಎಂಟಿ ಪ್ಲಾಂಟೇಷನ್ನಲ್ಲಿ ಸೆಟ್ ಹಾಕಿಕೊಂಡು ಚಿತ್ರೀಕರಣ ಆರಂಭಿಸಿದ್ದ ಟಾಕ್ಸಿಕ್ ಸಿನಿಮಾ ತಂಡವು, ನಿಯಮಾನುಸಾರ ಅನುಮತಿಯನ್ನು ಪಡೆದುಕೊಳ್ಳದೇ ಬೇಕಾಬಿಟ್ಟಿಯಾಗಿ ಮರಗಳನ್ನು ಕಡಿದು ಹಾಕಿದೆ. ಇದು ಅರಣ್ಯ ಇಲಾಖೆಯ ನಿಯಮಾನುಸಾರ ಅಪರಾಧವಾಗಿದೆ. ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ ಕಡಿಯುವುದು ದಂಡನೀಯ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಟಾಕ್ಸಿಕ್ ಸಿನಿಮಾ ತಂಡದಿಂದ ಮರ ಕಡಿದಿರುವ ಬಗ್ಗೆ ಸ್ಯಾಟಲೈಟ್ ಇಮೇಜ್ ಪಡೆದುಕೊಂಡಿದ್ದಾರೆ.
ಇಲ್ಲಿ ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೇ.? ಅನುಮತಿ ಕೊಟ್ಟಿದ್ದರೆ, ಅರಣ್ಯ ಭೂಮಿಯಲ್ಲಿ ಮರ ಕಡಿತಲೆಗೆ ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ. ಇನ್ನು ಅನುಮತಿ ಇಲ್ಲದೆ ಮರ ಕಡಿತಲೆ ಮಾಡಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಹಾಗಾಗಿ, ಸಚಿವ ಈಶ್ವರ್ ಖಂಡ್ರೆ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಇದರ ಬೆನ್ನಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಸಿನಿಮಾ ಸೆಟ್ ನಿರ್ಮಾಣಕ್ಕೆ ಮರಗಳ ಮಾರಣಹೋಮ ಮಾಡಿರುವ ಸಿನಿಮಾ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಅರಣ್ಯ ಇಲಾಖೆ ಕಾನೂನಿನ ಅನ್ವಯ ಕ್ರಮ ಆಗುತ್ತದೆ ಎಂದು ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ ಈಶ್ವರ ಖಂಡ್ರೆ ಅವರು, ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.