ಚಂದನವನದ ಹಿರಿಯ ನಟ ಸರಿಗಮ ವಿಜಿ ಅವರು ರಂಗಭೂಮಿ, ಸಿನಿಮಾ, ಸೀರಿಯಲ್.. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬಣ್ಣ ಹಚ್ಚಿ, ಸುಮಾರು 60 ವರ್ಷಗಳ ಕಾಲ ಕಲಾಸೇವೆ ಮಾಡಿದಂತಹ ಕಲಾಸಂತ. ಅಂದಹಾಗೆ ಇವರ ಹೆಸರು ವಿಜಯ್ ಕುಮಾರ್ ಇಂದು ವಿಧಿವಶರಾಗಿದ್ದಾರೆ.
![](https://guaranteenews.com/wp-content/uploads/2025/01/Untitled-design-2025-01-13T132201.150-1024x576.jpg)
ಸಂಸಾರದಲ್ಲಿ ಸರಿಗಮ ಅನ್ನೋ ನಾಟಕವನ್ನ ಅವರೇ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಅದೂ 1390 ಬಾರಿ ಪ್ರದರ್ಶನಗೊಂಡ ನಾಟಕ ಅದ್ದರಿಂದ ಅವರು ಕನ್ನಡಿಗರ ಜನಮಾನಸದಲ್ಲಿ ಸರಿಗಮ ವಿಜಿ ಆಗಿಬಿಟ್ಟರು. ಅಷ್ಟರ ಮಟ್ಟಿಗೆ ಅವರ ಹಾಸ್ಯ ಪ್ರಜ್ಞೆ ಎಲ್ಲರನ್ನ ಮೋಡಿ ಮಾಡುತ್ತಿತ್ತು.
![](https://guaranteenews.com/wp-content/uploads/2025/01/Untitled-design-2025-01-13T132040.004-1024x576.jpg)
1965ರಿಂದ 2024ರ ವರೆಗೆ ಸರಿಗಮ ವಿಜಿ ಅವರು ಹಗಲಿರುಳು ತಮ್ಮ ಇಡೀ ಜೀವಮಾನವನ್ನ ಕಲೆಗಾಗಿಯೇ ಅರ್ಪಿಸಿಕೊಂಡರು. ಹಾಗಾಗಿಯೇ ಅವ್ರು ಚಿತ್ರರಂಗದ ಶಕ್ತಿಯಾದರು. ರಂಗಕರ್ಮಿಗಳ ಪಾಲಿಗೆ ಗುರುವಾದರು. ಕಿರುತೆರೆ ಪಾಲಿನ ಮಾಸ್ಟರ್ ಆದ್ರು. 1975ರಲ್ಲಿ ಬೆಳುವಲದ ಮಡಿಲಲ್ಲಿ ಚಿತ್ರದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಂತಹ ಸರಿಗಮ ವಿಜಿ ಅವರು, 2018ನೇ ಇಸವಿಯ ವೇಳೆಗೆ ಬರೋಬ್ಬರಿ 269 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.
![](https://guaranteenews.com/wp-content/uploads/2025/01/Untitled-design-2025-01-13T132330.989-1024x576.jpg)
ಇದೀಗ 500 ಸಿನಿಮಾಗಳ ಗಡಿ ದಾಟಿದ್ರೂ ಅಚ್ಚರಿಯಿಲ್ಲ. ಮದುವೆ ಮಾಡಿ ನೋಡು, ಬೆಳುವಲದ ಮಡಿಲಲ್ಲಿ, ಕಪ್ಪು ಕೋಲ, ಪ್ರತಾಪ್, ಮನಮೆಚ್ಚಿದ ಸೊಸೆ, ಕೆಂಪಯ್ಯ IPS, ಗೋಲ್ಡ್ ಮೆಡಲ್, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ, ಸ್ವಾರ್ಥರತ್ನ ಚಿತ್ರಗಳು ಸರಿಗಮ ವಿಜಿ ಅವರ ಒಂದಷ್ಟು ಆಲ್ ಟೈಂ ಹಿಟ್ ಸಿನಿಮಾಗಳು.
![](https://guaranteenews.com/wp-content/uploads/2025/01/Untitled-design-2025-01-12T163709.030-1-1024x576.jpg)
ಬರೀ ನಟನೆಗಷ್ಟೇ ಸೀಮಿತಗೊಳ್ಳದ ಸರಿಗಮ ವಿಜಿ ಅವರು 80ಕ್ಕೂ ಅಧಿಕ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಕಿರುತೆರೆ ಲೋಕದಲ್ಲಿ ಸಾಲು ಸಾಲು ಧಾರಾವಾಹಿಗಳಿಗೆ ಕೆಲಸ ಮಾಡಿರೋ ಇವರು, ಸುಮಾರು 2400ಕ್ಕೂ ಅಧಿಕ ಸೀರಿಯಲ್ ಎಪಿಸೋಡ್ ಗಳನ್ನ ನಿರ್ದೇಶಿಸಿದ್ದಾರೆ. ಒಂದಷ್ಟು ಶೋಗಳಲ್ಲೂ ಭಾಗಿಯಾಗಿದ್ದ ಇವರು, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಗೆ ಜ್ಯೂರಿಯಾಗಿ ಮಿಂಚಿದ್ದರು.
ಸರಿಗಮ ವಿಜಿ ಇವರ 38 ವರ್ಷಗಳ ಕಲಾಸೇವೆ ಗುರ್ತಿಸಿ, ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ & ಎಜ್ಯುಕೇಷನ್ ಸಂಸ್ಥೆಯಿಂದ 2018ರಲ್ಲೇ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಡಾ ಸರಿಗಮ ವಿಜಿ ಅವರಲ್ಲಿ ಮೊನ್ನೆ ಮೊನ್ನೆವರೆಗೂ ಅದೇ ಉತ್ಸಾಹ, ಸೃಜನಶೀಲತೆ ಎದ್ದು ಕಾಣ್ತಿತ್ತು. ಕಲಾಸೇವೆ ಮಾಡೋ ಅವರ ತುಡಿತ ನಿಜಕ್ಕೂ ಅದೆಷ್ಟೋ ಮಂದಿಗೆ ಸ್ಫೂರ್ತಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್,
ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್