ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಂ. ಬಿ . ಆರ್. (ಮಂಜುನಾಥ್ ಬಿ.ಆರ್.) ಅವರು ನಿರ್ದೇಶಿಸುತ್ತಿರುವ, ನಾಗು ಶ್ರೀ ಎಸ್.ಎನ್. ಅವರ ನಿರ್ಮಾಣದ ಚಿತ್ರ ಶಾಲೆ.
ಮಕ್ಕಳ ಸಾಹಸದ ಕಥಾನಕ ಹೊಂದಿರುವ ಈ ಚಿತ್ರದ ಚಿತ್ರೀಕರಣದ ಪ್ರಾರಂಭೋತ್ಸವ ಡಾ. ಲೀಲಾವತಿ ಸ್ಮಾರಕ ಭವನದಲ್ಲಿ ನೆರವೇರಿತು. ಡಾ. ಲೀಲಾವತಿ ಅವರು ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.ಅಂಥ ಮಹಾನ್ ಕಲಾವಿದೆಯ ಸ್ಮಾರಕದ ಮುಂದೆಯೇ ಶಾಲೆ ಚಿತ್ರ ಆರಂಭವಾಗಿದೆ.
ಈ ಚಿತ್ರದ ಮುಹೂರ್ತ ದೃಶ್ಯಕ್ಕೆ ನಟ ವಿನೋದ್ ರಾಜಕುಮಾರ್ ಅವರು ಕ್ಲಾಪ್ ಮಾಡಿ ಚಾಲನೆ ನೀಡಿದರು. ನಂತರ ಮಾತನಾಡಿದ ವಿನೋದ್ ರಾಜ್, ನಮ್ಮ ತಾಯಿಯ ಹಾಗೂ ಆ ಭಗವಂತನ ಆಶೀರ್ವಾದದಿಂದ ಶಾಲೆ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿಕೊಂಡು ಆದಷ್ಟು ಬೇಗನೆ ಜನರ ಮುಂದೆ ಬರಲಿ ಎಂದು ಶುಭ ಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿವೆ. ಮೂವರು ಹುಡುಗರು ಅಂಥ ಸರ್ಕಾರಿ ಶಾಲೆಗಳನ್ನು ಮತ್ತೆ ತೆರೆಸುವ ನಿಟ್ಟಿನಲ್ಲಿ ನಡೆಸುವ ಪ್ರಯತ್ನ ಹಾಗೂ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಲು ಪಣತೊಟ್ಟು ಹೋರಾಡುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ಸರ್ಕಾರಿ ಶಾಲೆಯಲ್ಲಿ ಕಲಿಯದ ಹಲವಾರು ವಿಷಯಗಳ ಬಗ್ಗೆ ಈ ಸಿನಿಮಾ ಹೇಳಲಿದೆ. ಕೋಲಾರ, ಮಾಲೂರು, ಚಿಕ್ಕಮಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಮಂಜುನಾಥ್ ಬಿ ಆರ್. ಅವರು ಹೇಳಿದರು.
ಇನ್ನು ಈ ಚಿತ್ರದ ತಾರಾಗಣದಲ್ಲಿ ಹಿರಿಯ ನಟರಾದ ರಮೇಶ್ ಭಟ್, ಶಂಕರ್ ಅಶ್ವಥ್, ಮೀಸೆ ಅಂಜನಪ್ಪ, ಬಲರಾಮ್ ಪಾಂಚಲ್ ಸೇರಿದಂತೆ ಹಲವಾರು ಕಲಾವಿದರ ಜೊತೆಗೆ ಬಾಲ ಕಲಾವಿದರಾದ ಅಕ್ಷಿತ್, ಪಲ್ಲವಿ, ಯೋಗೀಶ್, ಜೀವಾ ಕೂಡ ನಟಿಸುತ್ತಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸದ್ಯದಲ್ಲೇ ತಾಂತ್ರಿಕ ಬಳಗದ ಮಾಹಿತಿ ನೀಡಲಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc