ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಅವರು ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ “ಶಿವಮ್ಮ”. ಗ್ರಾಮೀಣ ಸೊಗಡಿನ ಈ ಚಿತ್ರ ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳು ಈ ಚಿತ್ರಕ್ಕೆ ದೊರಕಿದೆ. “ಶಿವಮ್ಮ” ಚಿತ್ರವನ್ನು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ರಿಷಭ್ ಶೆಟ್ಟಿ ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.
ನಾನು ವಿಜಯ ಕರ್ನಾಟಕ ಪತ್ರಿಕೆ ನಡೆಸುವ ಕಿರು ಚಿತ್ರೋತ್ಸವಕ್ಕೆ ಹೋದಾಗ ನಿರ್ದೇಶಕ ಜೈಶಂಕರ್ ಆರ್ಯರ್ ಅವರ ಪರಿಚಯವಾಯಿತು. ಆನಂತರ ನಮ್ಮ “ಕಥಾ ಸಂಗಮ” ಚಿತ್ರದ ನಿರ್ದೇಶಕರಲ್ಲಿ ಅವರು ಒಬ್ಬರಾದರು. ಆನಂತರ ಜೈಶಂಕರ್ ಅವರು “ಶಿವಮ್ಮ” ಚಿತ್ರದ ಕಥೆ ಕುರಿತಾಗಿ ಹೇಳಿದರು. ಕಥೆ ಇಷ್ಟವಾಯಿತು. ನಿರ್ಮಾಣ ಆರಂಭಿಸಿದ್ದೆವು. ಕೋವಿಡ್ ಗೂ ಮುನ್ನ ಆರಂಭವಾದ ಚಿತ್ರವಿದು. ಉತ್ತರ ಕರ್ನಾಟಕದ ಯರೇಹಂಚಿನಾಳ ನಿರ್ದೇಶಕರ ಊರು. ಈ ಚಿತ್ರದಲ್ಲಿ ನಟಿಸಿರುವ “ಶಿವಮ್ಮ” ಪಾತ್ರಧಾರಿ ಶರಣಮ್ಮ ಚಟ್ಟಿ ಅವರ ಊರು ಕೂಡ ಅದೆ. ಆ ಊರಿನ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ. ಈವರೆಗೂ ಹದಿನೇಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಶಿವಮ್ಮ” ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿದೆ. ಜನರಿಗೂ ಈ ಚಿತ್ರ ಇಷ್ಟವಾಗಲಿದೆ. ಏಕೆಂದರೆ ನಾನು ಈ ಚಿತ್ರ ನೋಡಿದ್ದೇನೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾಗೆ ಸಿಕ್ಕ ಮೆಚ್ಚುಗೆ ನೋಡಿ ಖುಷಿಯಾಯಿತು. ಈಗ ಈ ಚಿತ್ರವನ್ನು ಜನರ ಮುಂದೆ ತರುತ್ತಿದ್ದೇನೆ. ಇದೇ ಜೂನ್ 14 ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. “ಶಿವಮ್ಮ” ಎಂಬ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರಕ್ಕಿರಲಿ ಎಂದರು ನಿರ್ಮಾಪಕ ರಿಷಭ್ ಶೆಟ್ಟಿ.
ನಾನು ಮೂಲತಃ ಐಟಿ ಉದ್ಯೋಗಿ. ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ ಯರೇಹಂಚಿನಾಳ ನನ್ನ ತಂದೆಯ ಊರು. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ನನ್ನ ಊರಿನ ಬಗ್ಗೆ ಸಿನಿಮಾ ಮಾಡುವ ಆಸೆಯಾಯಿತು. ಹಾಗಾಗಿ ನಮ್ಮ ಊರಿಗೆ ಹೋದೆ. ಕೋವಿಡ್ ನಿಂದಾಗಿ ಒಂದು ವರ್ಷ ಅಲ್ಲೇ ಇರಬೇಕಾಯಿತು. ಅದು ನನಗೆ ಅನುಕೂಲವಾಯಿತು. ಅಲ್ಲಿನ ಜನರ ಹಾಗೂ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಸಿಕ್ಕಿತ್ತು. ರಿಷಭ್ ಶೆಟ್ಟಿ ಅವರು ನಿರ್ಮಾಣಕ್ಕೆ ಮುಂದಾದರು. ನಮ್ಮ ಊರಿನವರಾದ ಶರಣಮ್ಮ ಚಟ್ಟಿ “ಶಿವಮ್ಮ”ನ ಪಾತ್ರಕ್ಕೆ ಆಯ್ಕೆಯಾದರು. ಅದೇ ಊರಿನ ಹೆಚ್ಚಿನ ಜನರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆನಂತರ ಚಿತ್ರೀಕರಣ ಪೂರ್ಣವಾಗಿ “ಶಿವಮ್ಮ” ಚಿತ್ರ ತೆರೆಗೆ ಬರಲು ಸಿದ್ದವಾಯಿತು. ಬಿಡುಗಡೆಗೂ ಮುನ್ನ ಒಂದುವರ್ಷದಿಂದ ಸಾಕಷ್ಟು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ. ಜೂನ್ 14 ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಜೈಶಂಕರ್ ಆರ್ಯರ್ ತಿಳಿಸಿದರು.
ನಿರ್ದೇಶಕ ಜೈಶಂಕರ್ ಅವರ ತಾಯಿಯನ್ನು ಮಾತನಾಡಿಸಲು ಹೋದಾಗ, ನನ್ನನ್ನು ನೋಡಿದ ಜೈಶಂಕರ್ ಅವರು ಸಿನಿಮಾದಲ್ಲಿ ಮಾಡುತ್ತೀರಾ ಎಂದರು. ನಮಗೆ ಇದೆಲ್ಲಾ ಹೊಸತು. ಯಾವಾಗಲಾದರು ಒಮ್ಮೆ ಸಿನಿಮಾ ನೋಡಿ ಗೊತ್ತಿದೆ ಅಷ್ಟೇ. ಆನಂತರ ನಮ್ಮ ಮನೆಯವರ ಹಾಗು ಊರಿನ ಹಿರಿಯರ ಅನುಮತಿ ಪಡೆದು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರತಂಡದವರು ನಮ್ಮನೆಲ್ಲಾ ಚೆನ್ನಾಗಿ ನೊಡಿಕೊಂಡಿದ್ದಾರೆ. ನಿರ್ದೇಶಕರು ಹಾಗು ತಂಡದವರು ನಟನೆ ಗೊತ್ತಿಲ್ಲದ ನಮಗೆ ನಟಿಸುವುದನ್ನು ಕಲಿಸಿದ್ದಾರೆ ಎಂದು “ಶಿವಮ್ಮ” ಪಾತ್ರಧಾರಿ ಶರಣಮ್ಮ ಚಟ್ಟಿ ಹೇಳಿದರು.
ಚಿತ್ರದಲ್ಲಿ ನಟಿಸಿರುವ ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ಶೃತಿ ಕೊಂಡೇನಹಳ್ಳಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ಪ್ರಮೋದ್ ಶೆಟ್ಟಿ ಚಿತ್ರಕ್ಕೆ ಶುಭ ಕೋರಿದರು.