ಕನ್ನಡದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ತಮ್ಮ ಮುಂದಿನ ಸಿನಿಮಾದ ಕತೆಯನ್ನು ಕುವೆಂಪು ಅವರ ಕವಿತೆಯಿಂದ ಸ್ಪೂರ್ತಿ ಪಡೆದು ಬರೆದಿದ್ದಾರೆ. ಈ ಸಿನಿಮಾ ಮೂಲಕ ಹೊಸ ನಟನೊಬ್ಬನನ್ನು ಪರಿಚಯಿಸುವ ಹುಮ್ಮಸ್ಸಿನಲ್ಲಿದ್ದಾರೆ. ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಹೀರೋಗಳ ಮಾಸ್ ಇಮೇಜ್, ಅದ್ಧೂರಿ ಮೇಕಿಂಗ್ ಅನ್ನು ಮಾತ್ರವೇ ನೆಚ್ಚಿಕೊಳ್ಳದೆ, ಕತೆಗೆ ಒತ್ತು ಕೊಡುವ ಕೆಲವೇ ನಿರ್ದೇಶಕರಲ್ಲಿ ಸಿಂಪಲ್ ಸುನಿ ಸಹ ಒಬ್ಬರು.
ಸಿಂಪಲ್ ಸುನಿ ಇದೀಗ ಹೊಸ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ. ವಿಶೇಷವೆಂದರೆ ಸಿಂಪಲ್ ಸುನಿ ಅವರ ಹೊಸ ಸಿನಿಮಾಕ್ಕೆ ಸ್ಪೂರ್ತಿ ನೀಡಿರುವುದು ರಾಷ್ಟ್ರಕವಿ ಕುವೆಂಪು ಅವರ ಒಂದು ಕವಿತೆ. “ಕನ್ನಡಿಗರಿಗೆ ಸಾಹಿತ್ಯದ ಬಗ್ಗೆ ಹೆಚ್ಚು ಪ್ರೀತಿ ಇದೆ. ಕನ್ನಡದಲ್ಲಿ ಸಾಹಿತ್ಯ ನಿಧಿಯೇ ಇದೆ. ಅದರಿಂದ ಸ್ಪೂರ್ತಿ ಪಡೆದು ನಾವು ಸಿನಿಮಾ ಕತೆಗಳನ್ನು ಕಟ್ಟಬೇಕಿದೆ” ಎಂದು ಹೇಳಿರುವ ಸಿಂಪಲ್ ಸುನಿ ಕುವೆಂಪು ಅವರ ಜನಪ್ರಿಯ ಕವಿತೆ ʻದೇವರು ಋಜು ಮಾಡಿದನು’ ಇಂದ ಸ್ಪೂರ್ತಿ ಪಡೆದು ಹೊಸ ಕತೆ ಬರೆದು ಸಿನಿಮಾ ಮಾಡುತ್ತಿದ್ದು ತಮ್ಮ ಸಿನಿಮಾಕ್ಕೆ ಅದೇ ಹೆಸರನ್ನು ಇಟ್ಟಿದ್ದಾರೆ. ಸಿಂಪಲ್ ಸುನಿ ʼವಿರಾಜ್ʼ ಹೆಸರಿನ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭವಾಗಲಿದೆ.