ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ನಿಧನರಾಗಿದ್ದಾರೆ. ಸ್ವಚ್ಛ ಕನ್ನಡದ ಮರೆಯಲಾಗದ ಧ್ವನಿ ಮೌನವಾಗಿರುವುದು ಕಲಾಭಿಮಾನಿಗಳಿಗೆ ಸಹಿಸಲಾರದ ನೋವು ತಂದಿದೆ. ಅಪರ್ಣಾ ಅವರ ಅಂತಿಮ ದರ್ಶನ ಪಡೆದ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಕನ್ನಡ ಭಾಷೆಯ ಸೊಗಸಾದ ನಿರೂಪಣೆಯಲ್ಲಿ ಅಪರ್ಣಾ ಅವರು ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಇತ್ತೀಚೆಗೆ ಅಪರ್ಣಾ ಅವರ ಸಿನಿ ಪಯಣದಲ್ಲಿ ಹೊಸ ಹುರುಪು ತಂದಿದ್ದು, ಸೃಜನ್ ಲೋಕೇಶ್ ನಿರ್ಮಾಣದ ಮಜಾ ಟಾಕೀಸ್. ಮಜಾ ಟಾಕೀಸ್ನಲ್ಲಿ ಅಪರ್ಣಾ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ತುಂಬಾ ಗಂಭೀರ ಸ್ವಭಾವದ ಅಪರ್ಣಾ ಅವರು ಮಜಾಟಾಕೀಸ್ನಂತ ಕಾಮಿಡಿ ಪಾತ್ರದಲ್ಲಿ ಅಭಿನಯಿಸಿದ್ದೇ ಒಂದು ಅಮೋಘ. ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಅಪರ್ಣಾ ಅವರು ಅಭಿನಯಿಸಿದ್ದು ಮತ್ತೊಂದು ಅದ್ಭುತ.
ಅಪರ್ಣಾ ಅವರನ್ನು ಮಜಾಟಾಕೀಸ್ನಲ್ಲಿ ಅಭಿನಯಿಸುವಂತೆ ಅವಕಾಶ ಕೊಟ್ಟ ಸೃಜನ್ ಲೋಕೇಶ್ ಅವರು ಭಾವುಕರಾಗಿದ್ದಾರೆ. ಅಪರ್ಣಾ ಅವರ ಮೇರು ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ರೀ ಲಾಂಜ್ ಬಗ್ಗೆ ನಿನ್ನೆಯೂ ಮಾತನಾಡುತ್ತಿದ್ದೆ. 20-30 ವರ್ಷಗಳ ಹಿಂದೆ ಅಪರ್ಣಾ ಅವರಿಗಿದ್ದ ಐಡೆಂಟಿಟಿ ಕಂಪ್ಲೀಟ್ ಬದಲಾಗಿದ್ದು ಮಜಾ ಟಾಕೀಸ್ನಲ್ಲಿ. ಈ ತರಹನೂ ಒಬ್ಬರ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಹುದು ಅನ್ನೋದು ತೋರಿಸಿಕೊಟ್ಟ ಪ್ರತಿಭೆ ಅಪರ್ಣಾ ಅವರು. ಅಪರ್ಣಾ ಅವರಿಗೆ ಅಪರ್ಣಾನೇ ಸಾಟಿ, ಅಪರ್ಣಾ ಅವರ ಸಾಧನೆ ಹಾಗೂ ವ್ಯಕ್ತಿತ್ವ ಅಷ್ಟು ದೊಡ್ಡದು. ಅವರಿಗಿದ್ದ ಕ್ಯಾನ್ಸರ್ ಕಾಯಿಲೆ ಬಗ್ಗೆ ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು. ಮಜಾ ಟಾಕೀಸ್ ನೋಡುವಾಗ ಅಪರ್ಣಾ ತುಂಬಾ ಖುಷಿ ಪಡುತ್ತಿದ್ದರು. ಡಾಕ್ಟರ್ ಅಪರ್ಣಾ ಅವರಿಗೆ ಹೆಚ್ಚು ಹೆಚ್ಚು ಮಜಾ ಟಾಕೀಸ್ ನೋಡಲು ಸಲಹೆ ನೀಡುತ್ತಿದ್ದರು.
ಮಜಾ ಟಾಕೀಸ್ ಶೋಗೆ ಅಪರ್ಣಾ ಅವರನ್ನು ಮೊದಲು ಆಯ್ಕೆ ಮಾಡಿದ್ದು ನಾನಲ್ಲ, ನನ್ನ ಪತ್ನಿ. ನನ್ನ ಹೆಂಡ್ತಿ ಅಪರ್ಣಾ ಅವರ ಜೊತೆ ಕೆಲಸ ಮಾಡುವಾಗ ಅವರ ಹಾಸ್ಯ ಪ್ರಜ್ಞೆಯ ಬಗ್ಗೆ ಹೇಳಿದ್ದರು. ಅವರು ಎಷ್ಟು ನಗಿಸುತ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲ ಎಂದಿದ್ದರು. ಆಗ ನಾನು ಅಪರ್ಣಾ ಅವರ ಜೊತೆ ಮಾತನಾಡಿದೆ. 2ನೇ ದಿನಕ್ಕೆ ಅಪರ್ಣಾ ಅವರು ತುಂಬಾ ಹೆದರಿಕೊಂಡಿದ್ದರು. ನನ್ನ ಬಗ್ಗೆ ತುಂಬಾ ಜನ ಮಾತನಾಡಿದ್ದಾರೆ ಎಂದರು ಆಗ ನಾನು ನನ್ನ ಮೇಲೆ ನಂಬಿಕೆಯಿಟ್ಟು ಧೈರ್ಯ ತುಂಬಿದೆ. ಆಸ್ಟ್ರೇಲಿಯಾ ಶೋ ಮಾಡಲು ಹೋದಾಗ ನಾನು ಅಂದು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದರು. ಅಪರ್ಣಾ ಅವರಿಗೆ ನಾನು ವರಲಕ್ಷ್ಮಿ ಅನ್ನೋ ಪಾತ್ರ ಮಾಡಲು ಹೇಳಿದ್ದೆ. ಅವರೇ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಅವರನ್ನು ಸೇರಿಸಿಕೊಂಡಿದ್ದರು. ತುಂಬಾ ತರ್ಲೆಗಳನ್ನು ಮಾಡಿದ್ದರು. ಮತ್ತೆ ಅದೇ ರೀತಿಯ ಅಪರ್ಣಾ ಅವರನ್ನು ಕಾಣಲು ಸಾಧ್ಯವಿಲ್ಲ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.