ಸಿನಿ ಪ್ರಿಯರ ಹೃದಯದಲ್ಲಿ ‘ಹುಚ್ಚ’ ಚಿತ್ರಕ್ಕೊಂದು ವಿಶೇಷ ಸ್ಥಾನವಿದೆ. ಅದಕ್ಕೆ ಕಾರಣ ನಾಯಕ ಸುದೀಪ್ ಅವರ ನಟನೆ. ತಮ್ಮ ಅದ್ಭುತ ನಟನೆಯ ಮೂಲಕ “ಹುಚ್ಚ’ ಚಿತ್ರದಲ್ಲಿ ಮಿಂಚಿದ್ದರು ಸುದೀಪ್. ನಟನೆ ಹಾಡು ಎಲ್ಲದರಲ್ಲೂ ಆ ಚಿತ್ರ ಮಾರ್ಕ್ಸ್ ಪಡೆದುಕೊಂಡಿತ್ತು. ಸುದೀಪ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಕೂಡಾ ಹೌದು. ಅದೇ ಕಾರಣದಿಂದ ಸುದೀಪ್ ಅವರಿಗೂ ಆ ಚಿತ್ರದ ಮೇಲೆ ವಿಶೇಷ ಪ್ರೀತಿ. ಈ “ಹುಚ್ಚ’ ಸಿನಿಮಾ ಮತ್ತೂಮ್ಮೆ ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದೆ. “ಹುಚ್ಚ’ ಚಿತ್ರ ಮರು ಬಿಡುಗಡೆಯಾಗಲಿದೆ. ಚಿತ್ರವನ್ನು ಮೂಲ ನಿರ್ಮಾಪಕರ ಅನುಮತಿ ಪಡೆದು ಎ.ಎಂ.ಎಸ್ ಬ್ಯಾನರ್ನ ನಿರ್ಮಾಪಕ ಎಸ್.ಡಿ. ಮುನಿಸ್ವಾಮಿ ಅವರು ಅಪ್ಪು ಆರ್ಟ್ಸ್ ಮೂಲಕ ರಿ ರಿಲೀಸ್ ಮಾಡುತ್ತಿದ್ದಾರೆ.
ಮುನಿಸ್ವಾಮಿ ಅವರು ಈಗಾಗಲೇ “ಕುಲ್ಫಿ’ ನಿರ್ಮಿಸಿದ್ದು, “ಲಂಕಾಸುರ’ ಚಿತ್ರದ ನಿರ್ಮಾಣದಲ್ಲೂ ತೊಡಗಿದ್ದರು. ನೆಗೆಟಿವ್ನಿಂದ ಡಿಜಿಟಲ್ ಫಾರ್ಮೆಟ್ಗೆ ಚಿತ್ರವನ್ನು ಬದಲಿಸಲಾಗಿದ್ದು, ಜೊತೆಗೆ ಎಫೆಕ್ಟ್ ಡಿಟಿಎಸ್, ಡಿಐ ಸೇರಿದಂತೆ ಇಡೀ ಸಿನಿಮಾವನ್ನು ತಾಂತ್ರಿಕವಾಗಿ ಅಪ್ಡೇಟ್ ಮಾಡಲಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ. “ಹುಚ್ಚ’ ಚಿತ್ರದ ಈ ಎಲ್ಲಾ ಕಾರ್ಯಗಳನ್ನು “ಲಂಕಾಸುರ’ ಚಿತ್ರದ ಸಹಾಯಕ ನಿರ್ದೇಶಕ ವಿಕ್ರಮ್ ಅವರು ನಿಂತು ಮಾಡಿಸಿದ್ದು, ಈ ತಿಂಗಳಾಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ