- ಸೋನಾಲ್ ಮಂಥೆರೊ ಅವರನ್ನ ತರುಣ್ ಸುಧೀರ್ ಕೈ ಹಿಡಿಯುತ್ತಾರಾ?
ರಾಬರ್ಟ್ ಸೆಟ್ನಲ್ಲಿ ತನು ಮೇಲೆ ತರುಣ್ಗೆ ಲವ್ವಾಯ್ತಾ? ಆ ಲವ್ವು ತನು ಮತ್ತು ತರುಣ್ನ ಮದ್ವೆವರೆಗೂ ಕರ್ಕೊಂಡು ಹೋಯ್ತಾ? ಹೀಗೊಂದು ಕುತೂಹಲದ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ತನು ಪಾತ್ರಧಾರಿ ಸೋನಾಲ್ ಮಂಥೆರೊ ಅವ್ರನ್ನ ರಾಬರ್ಟ್ ಡೈರೆಕ್ಟರ್ ತರುಣ್ ಸುಧೀರ್ ಕೈ ಹಿಡಿಯುತ್ತಾರೆನ್ನುವ ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಯಸ್, ಕಳೆದ ಎರಡು ದಿನಗಳಿಂದ ತರುಣ್ ಹಾಗೂ ಸೋನಾಲ್ ಮಂಥೆರೋ ಮದ್ವೆ ಮ್ಯಾಟ್ರು ಜೋರಾಗೆ ಸದ್ದು ಮಾಡುತ್ತಿದೆ.
ಆದರೆ ಈ ಬಗ್ಗೆ ನಾಯಕಿ ಸೋನಾಲ್ ಆಗ್ಲೀ, ನಿರ್ದೇಶಕ ತರುಣ್ ಆಗ್ಲೀ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಗಾಸಿಪ್ ಲೋಕದಲ್ಲಿ ಓಡಾಡ್ತಿರೋ ಬ್ರೇಕಿಂಗ್ ನ್ಯೂಸ್ಗೆ ಬ್ರೇಕ್ ಹಾಕೋ ಕೆಲಸ ಮಾಡ್ತಿಲ್ಲ. ಅಷ್ಟಕ್ಕೂ, ಈ ಸುದ್ದಿ ನಿಜಾನಾ? ಅಥವಾ ಜಸ್ಟ್ ರೂಮರ್ರಾ? ಸದ್ಯಕ್ಕಂತೂ ಉತ್ತರವಿಲ್ಲ. ಒಂದ್ವೇಳೆ ಈ ಸುದ್ದಿ ನಿಜವಾದರೆ ಸುಹಾಸಿನಿ ಮಣಿರತ್ನಂ, ಜೋಗಿ ಪ್ರೇಮ್ ರಕ್ಷಿತಾ ಅವ್ರ ಡೈರೆಕ್ಟರ್ ಪ್ಲಸ್ ಆಕ್ಟ್ರೆಸ್ ಜೋಡಿ ಲಿಸ್ಟ್ಗೆ ತರುಣ್ ಹಾಗೂ ಸೋನಾಲ್ ಸೇರ್ಪಡೆಗೊಳ್ಳಬಹುದು.
ಸೋನಾಲ್ ಮೂಲತಃ ಮಂಗಳೂರು ಮೂಲದ ಬೆಡಗಿ. ಆರಂಭದಲ್ಲಿ ತುಳು ಸಿನಿಮಾಗಳಿಗೆ ಬಣ್ಣ ಹಚ್ಚಿ ಸಿನಿಮಾಲೋಕಕ್ಕೆ ಪರಿಚಯಗೊಂಡರು. ನಂತರ ಅಭಿಸಾರಿಕೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ‘ಪಂಚತಂತ್ರ’, ಎಂಎಲ್ಎ, ‘ಡೆಮೊ ಪೀಸ್’, ‘ಗರಡಿ’ ಹಾಗೂ ‘ಶುಗರ್ ಫ್ಯಾಕ್ಟರಿ’ ರಾಬರ್ಟ್, ಬನಾರಸ್ ಹೀಗೆ ಅನೇಕ ಸಿನಿಮಾಗಳಲ್ಲಿ ಮಿಂಚಿದರು. ಸದ್ಯ ಬುದ್ದಿವಂತ-2 ಹಾಗೂ ಮಾರ್ಗರೇಟ್ ಲವ್ವರ್ ಆಫ್ ರಾಮಾಚಾರಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಈ ಮಧ್ಯೆ ಸೋನಾಲ್ ಮದ್ವೆ ಮ್ಯಾಟ್ರು ಲೀಕ್ ಆಗಿದೆ. ರಾಬರ್ಟ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ಹಸೆಮಣೆ ಏರ್ತಾರೆನ್ನುವ ಸುದ್ದಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ. ಈ ಮೇಲೆ ಹೇಳಿದಂತೆ ರಾಬರ್ಟ್ ಚಿತ್ರದಲ್ಲಿ ಸೋನಾಲ್ ಮಿಂಚಿದ್ದರು. ರಾಘವನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ ತನು ಮೇಲೆ ತರುಣ್ಗೆ ಲವ್ವಾಯ್ತಾ? ಅಥವಾ ಡೈರೆಕ್ಟರ್ ತರುಣ್ ಮೇಲೆ ತನುಗೆ ಲವ್ವಾಯ್ತಾ ಗೊತ್ತಿಲ್ಲ? ಆದರೆ, ಇಬ್ಬರು ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದು, ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಲು ನಿರ್ಧರಿಸಿದ್ದಾರೆನ್ನುವ ಸುದ್ದಿಯಂತೂ ಜೋರಾಗಿ ಕೇಳಿಬರ್ತಿದೆ.
ಇಂಟ್ರೆಸ್ಟಿಂಗ್ ಅಂದರೆ ಮದ್ವೆ ಡೇಟ್ ಸಮೇತ ಸುದ್ದಿ ಹೊರಬಿದ್ದಿದೆ. ಆಗಸ್ಟ್ 10ರಂದು ತರುಣ್ ಹಾಗೂ ಸೋನಾಲ್ ಕಲ್ಯಾಣ ನೆರವೇರುವ ಬಗ್ಗೆ ಮಾಹಿತಿ ಹರಿದಾಡ್ತಿದೆ. ಮಗ 40ರ ಆಸುಪಾಸಿನಲ್ಲಿದ್ದಾನೆ ಆತನಿಗೆ ಮದ್ವೆ ಮಾಡಿ ಮುಗಿಸಬೇಕು ಅನ್ನೋದು ತರುಣ್ ಅವರ ತಾಯಿ ಮಾಲತಿಯವರ ಕನಸಾಗಿತ್ತು. ಆ ಕನಸು ಈಗ ಈಡೇರುವ ಸಮಯ ಬಂದಾಗಿದೆ ಎನ್ನುತ್ತಿದೆ ಮೂಲಗಳು. ಇನ್ನೂ ತರುಣ್ ಸುಧೀರ್ ತಂದೆ ಸುಧೀರ್ ಅವರಂತೆ ಹಾಗೂ ಅಣ್ಣ ನಂದ ಕಿಶೋರ್ ಅವ್ರಂತೆ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಗಣೇಶನ ಮದುವೆ ಚಿತ್ರದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದ ತರುಣ್, ‘ಎಕ್ಸ್ಕ್ಯೂಸ್ಮಿ’, ‘ಚಪ್ಪಾಳೆ’, ‘ಜೊತೆ ಜೊತೆಯಲಿ’, ‘ವಿದ್ಯಾರ್ಥಿ’, ‘ನವಗ್ರಹ’, ‘ವಿಷ್ಣು ಸೇನಾ’ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ರನ್ನ, ವಿಕ್ಟರಿ, ರ್ಯಾಂಬೋ , ಗಜಕೇಸರಿ ಸೇರಿದಂತೆ ಹಲವು ಸಿನಿಮಾಗಳಿಗೆ ರೈಟರ್ ಆಗಿ ಕೆಲಸ ಮಾಡಿದ್ದಾರೆ. ರ್ಯಾಂಬೋ ಸಿನಿಮಾಗೆ ಸಹ ನಿರ್ದೇಶಕರಾಗಿ ದುಡಿದು, ಚೌಕ ಮೂಲಕ ಡೈರೆಕ್ಟರ್ ಹ್ಯಾಟ್ ತೊಟ್ಟ ತರುಣ್ ಸುಧೀರ್, ‘ರಾಬರ್ಟ್’ ಹಾಗೂ ‘ಕಾಟೇರ’ ದಂತಹ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯನ್ನಾಗಿ ಕೊಟ್ಟಿದ್ದಾರೆ. ಸದ್ಯ, ಮಹಾನಟಿ ರಿಯಾಲಿಟಿ ಶೋನ ಜಡ್ಜ್ ಆಗಿ ಕೂತಿದ್ದು, ವೈಯಕ್ತಿಕ ಬದುಕಿನಲ್ಲಿ ಹೊಸ ಜೀವನ ಆರಂಭಿಸೋಕೆ ತೆರೆಮರೆಯಲ್ಲಿ ತಯಾರಿ ನಡೆಸಿದ್ದಾರೆನ್ನುವ ಮಾಹಿತಿ ಲಭ್ಯವಾಗ್ತಿದೆ. ಅಂದ್ಹಾಗೇ, ತರುಣ್ ಚಿತ್ರರಂಗಕ್ಕೆ ಬರುವ ಮೊದಲು ಕೆಎಲ್ಇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಹೋಟೆಲ್ ಮ್ಯಾನೇಜ್ ಮೆಂಟ್ಕೋರ್ಸ್ ಮುಗಿಸಿದ್ರಂತೆ. ಅಶೋಕ ಹೋಟೆಲ್ನಲ್ಲಿ 1 ವರ್ಷ ಕೆಲಸ ಮಾಡಿರುವುದಾಗಿ ಸುದ್ದಿಯಿದೆ.