ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಪುರಿ ಜಗನ್ನಾಥ್ಗೆ ಯಾಕೋ ಸಮಯ ಸರಿ ಇದ್ದಂತಿಲ್ಲ. ತೆಲುಗು ಚಿತ್ರರಂಗದ ನಂಬರ್ 1 ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್, ಕೇವಲ ಒಂದೇ ಒಂದು ಫ್ಲಾಪ್ ಸಿನಿಮಾದಿಂದ ಮೂಲೆಗುಂಪಾಗಿಬಿಟ್ಟಿದ್ದರು. ಇದೀಗ ಮತ್ತೆ ಪುಟಿದೇಳುವ ಪ್ರಯತ್ನದಲ್ಲಿದ್ದಾಗಲೇ ಪುರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪುರಿ ನಿರ್ದೇಶಿಸಿರುವ ಹೊಸ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಯ್ತು. ಆದರೆ ಹಾಡಿನ ವಿರುದ್ಧ ಆಕ್ರೋಶ ಕೇಳಿ ಬಂದಿದ್ದು, ಪುರಿ ಸೇರಿದಂತೆ ಇನ್ನೂ ಕೆಲವರ ವಿರುದ್ಧ ದೂರು ಸಹ ದಾಖಲಾಗಿದೆ.
‘ಲೈಗರ್’ ಸಿನಿಮಾದ ಧಾರುಣ ಸೋಲಿನಿಂದ ಕಂಗೆಟ್ಟಿರುವ ನಿರ್ದೇಶಕ ಪುರಿ ಜಗನ್ನಾಥ್ ಇದೀಗ ‘ಡಬಲ್ ಇಸ್ಮಾರ್ಟ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ ಈ ಸಿನಿಮಾಕ್ಕೂ ಆರಂಭದಲ್ಲಿಯೇ ಸಂಕಷ್ಟ ಎದುರಾಗಿದೆ. ಸಿನಿಮಾದ ಐಟಂ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದ್ದು, ಹಾಡಿನ ವಿರುದ್ಧ ದೂರು ದಾಖಲಾಗಿದೆ.
ಐಟಂ ಹಾಡಿನಲ್ಲಿ ಮಾಜಿ ಮುಖ್ಯ ಮಂತ್ರಿಯ ಧ್ವನಿಯನ್ನು ಕೆಟ್ಟ ಅರ್ಥ ಬರುವಂತೆ ಬಳಸಿರುವುದಕ್ಕೆ ಬಿಎಸ್ಆರ್ ಪಕ್ಷದ ಮುಖಂಡರು ಆಕ್ಷೇಪ ಎತ್ತಿದ್ದಾರೆ. ಪಕ್ಷದ ನಾಯಕಿ ರಂಜಿತಾ ರೆಡ್ಡಿ ಎಂಬುವರು ಹಾಡನ್ನು ಯೂಟ್ಯೂಬ್ ನಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ನಿರ್ದೇಶಕ ಪುರಿ ಜಗನ್ನಾಥ್, ಹಾಡು ಬರೆದಿರುವ ಕಾಸರ್ಲ ಶ್ಯಾಮ್, ಸಿನಿಮಾ ಸಂಗೀತ ನಿರ್ದೇಶಕ ಮಣಿಶರ್ಮ ಇನ್ನಿತರರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಇನ್ನಿತರರು ತೆಲಂಗಾಣ ಜನರ ಕ್ಷಮೆ ಕೋರಬೇಕು ಎಂದು ಸಹ ಒತ್ತಾಯ ಮಾಡಿದ್ದಾರೆ.