- ಹಿಮಾಲಯಕ್ಕೆ ಭೇಟಿ ಕೊಟ್ಟ ತಲೈವಾ ರಜನಿಕಾಂತ್
- ಜಗತ್ತಿಗೆ ಆಧ್ಯಾತ್ಮಿಕತೆಯ ಅಗತ್ಯ ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯ
ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಅಂತನೇ ಕರೆಸಿಕೊಳ್ಳುವ ತಲೈವಾ ರಜನಿಕಾಂತ್ ಆಧ್ಯಾತ್ಮದ ಕಡೆ ವಾಲಿರುವುದು ನಿಮಗೆಲ್ಲ ಗೊತ್ತೆಯಿದೆ. ಬಿಡುವು ಸಿಕ್ಕಾಗಲೇ ದೇವರು, ದೈವ ಅಂತ ಟೆಂಪಲ್ ರನ್ ಮಾಡುವ ಪಡೆಯಪ್ಪ, ವರ್ಷಕ್ಕೊಮ್ಮೆ 15 ದಿನ ಸಿನಿಮಾಗಳಿಂದ ಬ್ರೇಕ್ ಪಡೆದು ಹಿಮಾಲಯದ ಕಡೆ ಪಯಣ ಬೆಳೆಸ್ತಾರೆ. ಅದರಂತೆ ಈ ವರ್ಷವೂ ಹಿಮಾಲಯಕ್ಕೆ ಭೇಟಿ ಕೊಟ್ಟಿದ್ದು ಡೆಹರೂಡನ್ನಲ್ಲಿ (Dehradun) ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಇಡೀ ಜಗತ್ತಿಗೆ ಆಧ್ಯಾತ್ಮಿಕತೆಯ ಅಗತ್ಯವಿದೆ, ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯವಾಗಿದೆ. ಆಧ್ಯಾತ್ಮಿಕವಾಗಿರುವುದು ಎಂದರೆ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುವುದು ಮತ್ತು ಮೂಲಭೂತವಾಗಿ ದೇವರಲ್ಲಿ ನಂಬಿಕೆಯನ್ನು ಕಾಣುವುದು ಎಂದಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಶಿವಾಜಿ, “ಪ್ರತಿ ವರ್ಷ ಹಿಮಾಲಯಕ್ಕೆ ಭೇಟಿ ಕೊಡ್ತೀನಿ ಪ್ರತಿ ಭಾರಿ ಭೇಟಿಕೊಟ್ಟಾಗಲೂ ನಾನು ಹೊಸ ಅನುಭವವನ್ನು ಪಡೆಯುತ್ತಿದ್ದೇನೆ. ಅದು ನನ್ನ ಆಧ್ಯಾತ್ಮಿಕ ಪ್ರಯಾಣವನ್ನು ಮತ್ತೆ ಮತ್ತೆ ಹಿಮಾಲಯಕ್ಕೆ ಬರುವಂತೆ ಮಾಡ್ತಿದೆ. ಈ ಬಾರಿಯೂ ಹೊಸ ಅನುಭವ ಪಡೆಯಲು ಎದುರುನೋಡ್ತಿದ್ದೇನೆ ಎಂದು ತಿಳಿಸಿದ್ದಾರೆ.
ತಲೈವಾ ವರ್ಷದ 365 ದಿನದಲ್ಲಿ ಹೆಚ್ಚು ಕಮ್ಮಿ 200 ದಿನ ಶೂಟಿಂಗ್ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರ್ತಾರೆ. 73ನೇ ವಯಸ್ಸಲ್ಲೂ ದಣಿವರಿಯದೇ ದುಡಿಯುವ, ಸಿನಿಮಾವನ್ನೇ ಧ್ಯಾನಿಸುವ ಪಡೆಯಪ್ಪ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಲೇ ಇರುತ್ತಾರೆ. ಜೈಲರ್ ಸಿನಿಮಾದ ನಂತರ ಮಗಳ ನಿರ್ದೇಶನದಲ್ಲಿ ಲಾಲ್ ಸಲಾಂಗೆ ಬಣ್ಣ ಹಚ್ಚಿದ ಬಾಬಾ, ಇತ್ತೀಚೆಗಷ್ಟೇ ವೆಟ್ಟೈಯನ್ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಜೈ ಭೀಮ್ ನಿರ್ದೇಶಕ ಟಿ.ಜೆ ಜ್ಞಾನವೇಲ್ ನಿರ್ದೇಶನದಲ್ಲಿ ವೆಟ್ಟೈಯನ್ ಸಿನಿಮಾ ಮೂಡಿಬಂದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಇತ್ತ ತಲೈವಾ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾ ಅಖಾಡಕ್ಕೆ ಕಾಲಿಡುವ ಮುನ್ನ ಹದಿನೈದು ದಿನಗಳ ಕಾಲ ಹಿಮಾಲಯ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪಡೆಯಪ್ಪ ಬೆಟ್ಟಗುಡ್ಡಗಳ ಮಧ್ಯೆ ನಿಂತು ನಗುಬೀರಿರೋ ಫೋಟೋ ವೈರಲ್ ಆಗಿದೆ. ಬದ್ರೀನಾಥ್, ಕೇದಾರನಾಥ್ ಸೇರಿದಂತೆ ಸುತ್ತಮುತ್ತಲಿನ ತೀರ್ಥಕ್ಷೇತ್ರಗಳತ್ತ ತಮ್ಮ ಸ್ನೇಹಿತರೊಡನೆ ತೆರಳಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ನೋಡಲಿಕ್ಕೆ ಸಿಗುತ್ತಿವೆ.