ಪ್ಯಾನ್ ಇಂಡಿಯಾ ಸ್ಟಾರ್, ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಅಪಘಾತಕ್ಕೀಡಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಿನ್ನೆ ರಾತ್ರಿ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಸಿನಿಮಾ ಶೂಟಿಂಗ್ ವೇಳೆ ಎನ್ ಟಿ ಆರ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು.
ಅಪಘಾತದಲ್ಲಿ ಅವರ ಎಡಗೈ ಮಣಿಕಟ್ಟು ಹಾಗೂ ಕೈ ಬೆರಳುಗಳಿಗೆ ಗಾಯವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದಕ್ಕೆ ಎನ್ ಟಿಆರ್ ಚಿತ್ರತಂಡ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ. ಜೂನಿಯರ್ ಎನ್ ಟಿಆರ್ ಸುರಕ್ಷಿತವಾಗಿದ್ದು, ಯಾವುದೇ ಅಪಘಾತ ಸಂಭವಿಸಿಲ್ಲ ಎಂದಿದ್ದಾರೆ.
ಎನ್ಟಿಆರ್ ಕೈಗೆ ಗಾಯವಾಗಿರೋದು ನಿಜ, ಜಿಮ್ ಮಾಡುವಾಗ ಎನ್ ಟಿಆರ್ ಕೈಗೆ ಗಾಯವಾಗಿದೆ ಎಂದು ತಂಡ ಅಧಿಕೃತ ಮಾಹಿತಿ ನೀಡಿದೆ. ಆದರೆ ಅದು ದೊಡ್ಡ ಗಾಯವಲ್ಲ. 2 ವಾರಗಳ ವಿಶ್ರಾಂತಿ ಪಡೆದ ನಂತರ ಗುಣಮುಖರಾಗ್ತಾರೆ ಎಂದು ವೈದ್ಯರು ಸೂಚಿಸಿದ್ದಾರೆ.
ಗಾಯ ಚಿಕ್ಕದಾಗಿದ್ದು, ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದು ತಂಡ ಬಹಿರಂಗಪಡಿಸಿದೆ. ರಸ್ತೆ ಅಪಘಾತವಾಗಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎನ್ನಲಾಗಿದೆ. ಎನ್ ಟಿಆರ್ ಅವರು ಕೊರಟಾಲ ಶಿವ ನಿರ್ದೇಶನದ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿನ್ನೆ ರಾತ್ರಿ ಅವರು ಟ್ವಿಟರ್ ನಲ್ಲಿ ಈ ಚಿತ್ರದ ಬಗ್ಗೆ ಅಪ್ ಡೇಟ್ ಹಾಕಿದ್ದಾರೆ.
ಆದರೆ, ತಮ್ಮ ನೆಚ್ಚಿನ ನಟ ಅಪಘಾತಕ್ಕೀಡಾಗಿರುವ ಸುದ್ದಿ ಬಂದಾಗ ಅಭಿಮಾನಿಗಳು ಕಂಗಾಲಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತಂಡ ಅಧಿಕೃತ ಸ್ಪಷ್ಟನೆ ನೋಡಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.