ರಾಕಿಂಗ್ ಸ್ಟಾರ್ ಯಶ್ ಅಂದ ಕೂಡಲೇ ಅಭಿಮಾನಿಗಳ ಕಣ್ಣು ಕಿವಿ ಅಲರ್ಟ್ ಆಗಿ ಗಮನಿಸ್ತಾರೆ. ಕೆಜಿಎಫ್ ನಂತಹ ಬ್ಲಾಕ್ಬಸ್ಟರ್ ಕೊಟ್ಟ ನಂತರ ಯಶ್ ಪ್ರತೀ ನಡೆಯೂ ಕುತೂಹಲಕಾರಿಯೇ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್ ಮೂಲಕ ಯಶ್ ಯಶೋಗಾಥೆ ಮುಂದುವರೆಯುತ್ತೆ ಅನ್ನೋದು ಗೊತ್ತಾದಾಗ ಸಹಜವಾಗೇ ಫ್ಯಾನ್ಸ್ ಸಖತ್ ಖುಷಿಪಟ್ರು.
ರಾಕಿಂಗ್ ಸ್ಟಾರ್ ಯಶ್ ಜೊತೆ ಲೇಡಿ ಸೂಪರ್ಸ್ಟಾರ್ ನಯನತಾರಾ ಮೊಟ್ಟಮೊದಲ ಬಾರಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಶೃತಿ ಹಾಸನ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಕೂಡಾ ಚಿತ್ರತಂಡ ಸೇರಲಿದ್ದಾರೆ. ಇಷ್ಟೊಂದು ಭಾರೀ ತಾರಾಗಣವಿರುವ ಟಾಕ್ಸಿಕ್ ಏಪ್ರಿಲ್ 10, 2025ಕ್ಕೆ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು.
ಆದ್ರೆ ಈಗ ಆ ದಿನಾಂಕ ಮುಂದೂಡಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಇಷ್ಟೆಲ್ಲಾ ಭಾರೀ ತಾರಾಗಣ ಇರೋದ್ರಿಂದ ಎಲ್ಲರ ಡೇಟ್ಗಳನ್ನು ಹೊಂದಿಸುವುದು ಕೂಡಾ ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಈಗಾಗಲೇ ಚಿತ್ರದ ಕೆಲಸ ಶುರುವಾಗಿರೋದು ಹೌದಾದ್ರೂ ಅಂದುಕೊಂದಷ್ಟು ಬೇಗ ಶೂಟಿಂಗ್ ಮುಗಿಯೋದು ಸ್ವಲ್ಪ ಕಷ್ಟವೇ ಆಗಿದೆ. ಆದ್ದರಿಂದ ಅನಿವಾರ್ಯವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಇನ್ನು ಟಾಕ್ಸಿಕ್ ಶೂಟಿಂಗ್ ಗಾಗಿ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ ಮುಖ್ಯ ಸೀಕ್ವೆನ್ಸ್ ಒಂದರ ಶೂಟಿಂಗ್ ಅಲ್ಲಿ ನಡೆಯಲಿದೆಯಂತೆ. ಆ ಸೀಕ್ವೆನ್ಸ್ನಲ್ಲಿ ಟಾಕ್ಸಿಕ್ ನ ಮುಖ್ಯ ಪಾತ್ರಧಾರಿಗಳೆಲ್ಲಾ ಒಟ್ಟಿಗೆ ನಟಿಸಲಿದ್ದಾರೆ ಎನ್ನಲಾಗಿದೆ.