ದೊಡ್ಮನೆ ಕುಡಿ ನಟ ಯುವ ರಾಜಕುಮಾರ್ ದಾಂಪತ್ಯದಲ್ಲಿನ ಬಿರುಕು ಮೂಡಿರುವುದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಪ್ರೀತಿಸಿ ಮದುವೆಯಾದ ಯುವ ರಾಜಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಐದು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಆರು ತಿಂಗಳ ಹಿಂದೆ ಶ್ರೀದೇವಿಯಿಂದ ವಿಚ್ಛೇದನಕ್ಕೆ ಕೋರಿ ಯುವ ರಾಜಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಗೆ ಡಿವೋರ್ಸ್ ನೀಡಲು ನಿರಾಕರಿಸ್ತಿರುವ ಶ್ರೀದೇವಿಗೆ ನ್ಯಾಯಾಲಯದ ಪ್ರಕ್ರಿಯೆಯಂತೆ ನೋಟಿಸ್ ಜಾರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಯುವರಾಜ್ ಕುಮಾರ್ ವಿಚ್ಛೇದನ ಪ್ರಕರಣಕ್ಕೆ ಇಂದು ನಿರ್ಣಾಯಕ ದಿನವಾಗಿದೆ .ಇಂದು ಡಿವೋರ್ಸ್ ವಿಚಾರವಾಗಿ ಫ್ಯಾಮಿಲಿ ಕೋರ್ಟ್ ಬರಬೇಕಿದ್ದ ಶ್ರೀದೇವಿ ಭೈರಪ್ಪ ಗೈರಾಗಲಿದ್ದಾರೆ. ಡಿವೋರ್ಸ್ ಪ್ರಕರಣ ವಿಚಾರವಾಗಿ ಅಮೇರಿಕಾದಿಂದ ಬಂದಿದ್ದ ಶ್ರೀದೇವಿ ಈಗ ಮತ್ತೆ ಅಮೇರಿಕಾಗೆ ಹಿಂತಿರುಗುತ್ತಿರುವ ವಿಷಯ ತಿಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಾರ್ವರ್ಡ್ನಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ಸಲುವಾಗಿ ಭಾರತದಿಂದ ಅಮೇರಿಕಾಗೆ ಹೋಗ್ತಿದೀನಿ ಎಂದಿರುವ ಶ್ರೀದೇವಿ ನನ್ನ ಮೇಲೆ ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ಕೊಡ್ತೀನಿ, ನಾನು GIVE UP ಮಾಡಲ್ಲ, ಸರಿಯಾದ ಸಮಯ ಬಂದಾಗ ಮತ್ತೆ ವಾಪಾಸ್ ಬರ್ತೀನಿ ಎಂದಿದ್ದಾರೆ.
ಇತ್ತ ಯುವರಾಜ್-ಶ್ರೀದೇವಿ ದಾಂಪತ್ಯದ ಕಲಹ ಬೀದಿಗೆ ಬರ್ತಿದಂತೆ ಎಚ್ಚೆತ್ತ ಶಿವಣ್ಣ ಮಧ್ಯಸ್ಥಿಕೆ ವಹಿಸಿ ಹಾದಿ ಬೀದಿ ಜಗಳ ಬೇಡ ಅಂತ ಬುದ್ದಿ ಮಾತು ಹೇಳಿದ್ದಾರೆ ಎನ್ನಲಾಗಿದೆ. ಯುವ ಹಾಗೂ ಶ್ರೀದೇವಿ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಏನೂ ಮಾತಾಡದೆ ಮೌನವಹಿಸಿದ್ದಾರೆ.