ದೇಶಕಂಡ ಅಪ್ರತಿಮ ನಾಯಕ ಕಾಂಗ್ರೆಸ್ ನ ಹಿರಿಯ ಮುತ್ಸದ್ದಿ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ಸಾವನ್ನಪ್ಪಿದ್ದಾರೆ. ಅವರ ಅಗಲಿಕೆಗೆ ದೇಶದ ಗಣ್ಯರೆಲ್ಲರು ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಕರ್ನಾಟಕದ ಕಾಂಗ್ರೆಸ್ ನಾಯಕರು ಸಹ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ ಕೈ ನಾಯಕರು, ಮನಮೋಹನ್ ಸಿಂಗ್ ಅವರ ಕೊಡಿಗೆಗಳನ್ನ ಹಾಡಿ ಹೊಗಳಿದ್ದರು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆಗಿದ್ದ ಸಾಧನೆಗಳ ಕುರಿತು ಸಿಎಂ ಡಿಸಿಎಂ ಮನಬಿಚ್ಚಿ ಮಾತನಾಡಿದ್ದರು. ಇದರ ಜೊತೆಗೆ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಲು ಶುಕ್ರವಾರ ರಾಜ್ಯ ಸರ್ಕಾರ ಸರ್ಕಾರಿ ರಜಾ ಘೋಷಣೆ ಮಾಡಿತ್ತು. ಹಾಗೂ 7 ದಿನಗಳ ಕಾಲ ಸಂತಾಪ ಸೂಚನೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
92 ವರ್ಷದ ವಯೋಸಹಜ ಅನಾರೋಗ್ಯ ಕಾರಣದಿಂದ ಕೊನೆಯುಸಿರೆಳೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ದೆಹಲಿಯಲ್ಲಿರುವ ನಿಗಮ್ ಬೋಧ ಘಾಟ್ನಲ್ಲಿ ಬೆಳಗ್ಗೆ 11:45 ಕ್ಕೆ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ.
ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ ಗೃಹ ಇಲಾಖೆಯು ರಕ್ಷಣಾ ಇಲಾಖೆಗೆ ಪತ್ರ ಬರೆದಿತ್ತು. ಅದರಂತೆ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಖಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಲಿದೆ.
ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನ ಅವರ ಮನೆಯಿಂದ ಮೆರವಣಿಗೆಯ ಮೂಲಕ ಎಐಸಿಸಿ ಕಚೇರಿಗೆ ಅಂತಿಮ ನಮನ ಸಲ್ಲಿಸಲು ಕರೆತರಲಾಗಿತ್ತು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ. ಮನಮೋಹನ್ ಸಿಂಗ್ ಅವರಿಗೆ ಪುಷ್ಪನಮನ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಸಹ ದೆಹಲಿಗೆ ತೆರಳಿದ್ದು, ಎಐಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಇವರ ಜೊತೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಸಹ ಅಂತಿಮ ಸಲ್ಲಿಸಿದರು.
ಎಐಸಿಸಿ ಕಚೇರಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಪಾರ್ಥಿವ ಶರೀರವನ್ನ ಅಂತಿಮ ಯಾತ್ರೆಯ ಮೂಲಕ ದೆಹಲಿಯ ನಿಗಮ್ ಬೋಧ್ ಘಾಟ್ ನಲ್ಲಿ ನಡೆಸಲು ಸಕಲ ಸಿದ್ದತೆ ನಡೆದಿದೆ.
ಡಾ. ಮನಮೋಹನ್ ಸಿಂಗ್ ಅವರು ಸಿಖ್ ಧರ್ಮಕ್ಕೆ ಸೇರಿದವರು, ಹೀಗಾಗಿ ಸಿಖ್ ಧಾರ್ಮಿಕ ವಿಧಿವಿಧಾನಗಳ ಪ್ರಕಾರವೇ ಧಾರ್ಮಿಕ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಸರ್ಕಾರಿ ಗೌರವಗಳೊಂದಿಗೆ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ. ಮಾಜಿ ಪ್ರಧಾನಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಲಿದ್ದಾರೆ.