ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಇಂಥವರ ಕೈಯಲ್ಲಿ ಹಣಕಾಸು ಖಾತೆ ನೀಡಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ಹೇಳಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ನಿರ್ಮಲಾ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) 10 ವರ್ಷ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರು. ಅನುದಾನ ನೀಡಿದ್ದರೆ, ಎನ್ಡಿಎ ಸರ್ಕಾರ (2014-2024) 2,36,955 ಕೋಟಿ ರು. ನೀಡಿದೆ. ಆದರೆ 10 ವರ್ಷದಲ್ಲಿ ಕೇಂದ್ರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.