ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಚಟುವಟಿಕೆ ನಡೆಯುತ್ತಿದೆ. ವಿಶೇಷವಾಗಿ ಹಿರಿಯ ಸಚಿವರು ದೆಹಲಿ ಭೇಟಿ ಮಾಡುವುದು ನೋಡಿದರೆ ಗೊತ್ತಾಗುತ್ತದೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ಪಟ್ಟಣದ ಹಳೇ ಸರಾಫ ಬಜಾರನಲ್ಲಿ ಶ್ರೀ ಅಂಬಾ ಭವಾನಿ ದೇವಸ್ಥಾನ ಸಮಾಜ ಪಂಚ ಕಮೀಟಿ ವತಿಯಿಂದ ಏರ್ಪಡಿಸಿದ “ನಾಡಹಬ್ಬ / ನಮ್ಮೂರ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ನೀಡಿದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ನಮಗೆ ಅವಕಾಶ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಸತತ, ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದರು.
ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ. ರಾಜ್ಯಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಇಂತಹ ಸರ್ಕಾರದ ಪಡೆದಿರುವುದು ಕರ್ನಾಟಕದ ದೌರ್ಭಾಗ್ಯ, ಆದರೆ, ಈ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಹೇಳಿದರು. ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಯಾವುದೇ ಕೆಲಸಕ್ಕೆ ಭೇಟಿಯಾಗಿರಬಹುದು.
ನಮ್ಮ ಹೈಕಮಾಂಡ್ ಬಹಳ ಸ್ಪಷ್ಟವಾಗಿದೆ, ಈ ಸರ್ಕಾರ ಅಭದ್ರಗೊಳಿಸುವ ಪ್ರಶ್ನೆ ಇಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ಎಂದರು. ದಸರಾ ನಂತರ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಬೊಮ್ಮಾಯಿ, ವಿಜಯೇಂದ್ರ ಅವರ ಲೆಕ್ಕಾಚಾರದಲ್ಲಿ ಹೇಳಿದ್ದಾರೆ. ನನ್ನ ಪ್ರಕಾರ ಸಿಎಂ ರಾಜೀನಾಮೆ ನೀಡಲು ಮಾನಸಿಕವಾಗಿ ತಯಾರಿ ಆಗುತ್ತಿದ್ದಾರೆ ಎಂದು ಹೇಳಿದರು.
ಜಾತಿಗಣತಿ ವಿಷಯವಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿಕೆ ಪ್ರತಿಕ್ರಿಯಿಸಿ ಅವರು ಮನದಾಳದ ಮಾತು ಹೇಳಿದ್ದಾರೆ. ಜಾತಿಗಣತಿ ಮುಖ್ಯನೋ ಸರ್ಕಾರ ಬೀಳೋದು ಮುಖ್ಯವೋ ಅನ್ನುವುದನ್ನು ಬಿ.ಕೆ ಹರಿಪ್ರಸಾದ್ ಸ್ಪಷ್ಟ ಪಡಿಸಲಿ. ಜಾತಿಗಣತಿ ಪ್ರಕ್ರಿಯೆ ಅಲ್ಲ, ಅದು ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಮಾಡಿದ್ದು. ನಿಖರವಾಗಿ ಜಾತಿಗಣತಿಯ ಆದೇಶವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಕಮಿಟಿ ಕೊಟ್ಟ ವರದಿಯನ್ನು ಯಾಕೆ ಸ್ವೀಕರಸಿಲ್ಲ. ಜಯಪ್ರಕಾಶ್ ಹೆಗಡೆ ಅವರು ಆಯೋಗದ ಅಧ್ಯಕ್ಷರಾಗಿ 2-3 ತಿಂಗಳಲ್ಲಿ ಹೇಗೆ ವರದಿ ಕೊಡುತ್ತಾರೆ ?
ಕಾಂತರಾಜ್ ಅವರು 2-3 ವರ್ಷ ಡಾಟಾ ತೆಗೆದುಕೊಂಡಿದ್ದರು. ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಆ ವರದಿ ತೆಗೆದುಕೊಂಡು ಹಿಂದುಳಿದ ವರ್ಗ ಉದ್ದಾರ ಮಾಡುತ್ತೇವೆ ಅಂತ ಹೇಳುತ್ತಾರೆ, ವೈಜ್ಞಾನಿಕವಾಗಿ ಆಗಬೇಕೇ ಹೊರತು ಗೊಂದಲ ಆಗಬಾರದು ಎಂದರು. ಹಿಂದುಳಿದವರಿಗೆ ಹೆಚ್ಚಿನ ಕಾರ್ಯಕ್ರಮ ಬರಬೇಕು. ಜಾತಿಗಣತಿ ಬಿಡುಗಡೆ ಮಾಡಿ ಅಂತಾ ಮೊನ್ನೆಯೇ ಹೇಳಿದ್ದೇನೆ. ವರದಿಕೊಟ್ಟು 8-10 ತಿಂಗಳಾಯಿತು ಯಾಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಗದಗ ಜಿಲ್ಲೆಯ ಕಪ್ಪತ್ ಗುಡ್ಡದ ಜೀವ ವೈವಿಧ್ಯತೆಯಲ್ಲಿ ಅಸಮತೋಲನ ಉಂಟಾಗಿದ್ದು ಅದನ್ನು ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕೆಂದು ಒತ್ತಾಯಿಸದರು. ಗದಗ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ವನ್ಯ ಜೀವಿ ಮಂಡಳಿ ಸಭೆ ಮಾಡಿದಾಗ ನಿಸರ್ಗವನ್ನು ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದೆ, ಈಗಲೂ ಕೂಡ, ಮುಖ್ಯಮಂತ್ರಿ ಕಪ್ಪತ ಗುಡ್ಡದ ಜೀವ ವೈವಿಧ್ಯತೆ ಕಾಪಾಡಲು ಗಣಿಗಾರಿಕೆಯಂತಹ ಚಟುವಟಿಕೆ ನಡೆಯಲು ಅವಕಾಶ ಕೊಡದೇ ಈ ಭಾಗದ ಮೂರುನಾಲ್ಕು ಜಿಲ್ಲೆಯ ಪರಿಸರ ಕಾಪಾಡುವ ತೀರ್ಮಾನ ಮಾಡಬೇಕೆಂದು ಹೇಳಿದರು.