ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಜೆಡಿಎಸ್ ಪ್ರಾಬಲ್ಯದ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟೀಂ ಮುಂದಾಗಿದೆ. ಡಿಸೆಂಬರ್ 5 ರಂದು ಮೆಗಾ ರ್ಯಾಲಿ ನಡೆಸಲು ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.
ಇನ್ನು ಈ ಬಗ್ಗೆ ಇತ್ತೀಚೆಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಾಹಿತಿ ನೀಡಿದ್ದು, ಡಿಸೆಂಬರ್ 2 ರಂದು ತುಮಕೂರು ಹಾಗೂ ಡಿಸೆಂಬರ್ 5 ರಂದು ಹಾಸನದಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವ ಬಲಪಡಿಸುವ ಉದ್ದೇಶವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಶಕ್ತಿ ಫುಲ್ ಇದೆ. ಎಂಟತ್ತು ಹೆಣ್ಣು ಕುರಿಗಳಿಗೆ ಒಂದೇ ಟಗರು ಇರುತ್ತೆ ಗೊತ್ತಲ್ಲವೇ? ಸಿದ್ದರಾಮಯ್ಯ ಎಂಬ ಟಗರು ಮುಡ, ಇಡಿ ಇಂಥದ್ದಕ್ಕೇಲ್ಲಾ ಹೆದರಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರ 40 ವರ್ಷಗಳ ರಾಜಕೀಯ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಚಾರ ಕೇಸ್ನಲ್ಲಿ ತನಿಖಾ ಸಂಸ್ಥೆಯೊಂದರ ವಿಚಾರಣೆಗೆ ಹಾಜರಾಗಿದ್ದರು. ಮುಡಾ ಹಗರಣ ಅವರ ರಾಜಕೀಯ ಹಾದಿಗೆ ಒಂದಿಷ್ಟು ಹಿನ್ನೆಡೆ ಉಂಟು ಮಾಡಿರಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಬೃಹತ್ ಸಮಾವೇಶ ನಡೆಸಿ ಮತ್ತೆ ಸಿದ್ದರಾಮಯ್ಯನವರು ಶಕ್ತಿ ಪ್ರದರ್ಶನ ಮಾಡುವ ಉದ್ದೇಶ ಹೊಂದಲಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯನವರ 75 ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಸಿದ್ದರಾಮಯ್ಯನವರ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸಿದ್ದರು. ಸದ್ಯ ಅದೇ ಮಾದರಿಯಲ್ಲಿ ರಾಜ್ಯಾದ್ಯಂತ ಸಿದ್ದರಾಮಯ್ಯನವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರನ್ನು ಹಾಸನದಲ್ಲಿ ಡಿಸೆಂಬರ್ 5 ರಂದು ಸೇರಿಸುವ ಯೋಜನೆ ಇದೆ.