ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲಾ ಎಂಬುದು ರಾಜ್ಯ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಖಾಸಗೀ ವಾಹನಿಗೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಿದ್ದರು. ಅವರ ಈ ಹೇಳಿಕೆ ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯನವರು ಚಾಮರಾಜನಗರದಲ್ಲಿ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಸತ್ತೇಗಾಲದಲ್ಲಿ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ನಾನು ರಾಜಕೀಯ ಕೊನೆಗಾಲದಲ್ಲಿ ಇದ್ದೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ನಾನು ರಾಜಕೀಯ ಕೊನೆಗಾಲದಲ್ಲಿ ಇದ್ದೇನೆ’. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವೈರಾಗ್ಯದ ಮಾತನ್ನಾಡಿದ್ದಾರೆ.
ಜೆ.ಹೆಚ್.ಪಟೇಲರಿಗೆ ಆಗಿನ ಕೆಲ ಶಾಸಕರು ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಹೇಳಿದ್ದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ಆದರೆ ನಾನು 2ನೇ ಬಾರಿ CM ಆಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ಅವರು ನಂಬಿರಲಿಲ್ಲ, ನಾನೂ ನಂಬಲಿಲ್ಲ. ರಾಜಕೀಯದಲ್ಲಿ ಉಳಿಯಬೇಕು ಅಂದ್ರೆ ಜನರ ವಿಶ್ವಾಸ ಗಳಿಸಬೇಕು. ಆದರೆ ‘ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ’ಎಂದು ಮುಡಾ ಅಕ್ರಮದ ತೂಗುಗತ್ತಿ ಮಧ್ಯೆ ಸಿಎಂ ಅಚ್ಚರಿ ಹೇಳಿಕೆ ನೀಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.