ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿದ್ರು ಆಗಲಿಲ್ಲ. ಈಗ ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ. ನಮ್ಮ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ. ಹೀಗಾಗಿ ನಮ್ಮ ಸರ್ಕಾರದ ಬಗ್ಗೆ ಬಿಜೆಪಿ-ಜೆಡಿಎಸ್ಗೆ ಭಯವಿದೆ. ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆಂದು ಸುಳ್ಳು ಹೇಳಿಕೆ ನೀಡಿದ್ರು, ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದ್ದೇವ ಹೇಳಲಿ. ಬಡವರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಭಯವಿದೆ. ಹೀಗಾಗಿ ಬಿಜೆಪಿ-ಜೆಡಿಎಸ್ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದರು.
ಇನ್ನು ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಸಿಎಂ ಫುಲ್ ಗರಂ ಆಗಿದ್ದಾರೆ. ಬಿಎಸ್ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಆಗಿದೆ. ಹೀಗಾಗಿ ಬಿಎಸ್ವೈಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದರು. ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ. ಇಲ್ಲವಾದರೇ ಯಡಿಯೂರಪ್ಪ ಜೈಲಲ್ಲಿ ಇರಬೇಕಿತ್ತು. 82 ವರ್ಷ ವಯಸ್ಸಿನಲ್ಲಿ ಇದು ಬೇಕಿತ್ತಾ? ಚಿಕ್ಕ ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ? ಯಡಿಯೂರಪ್ಪಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಮಾತನಾಡುವುದ್ದಕ್ಕೆ. ಯಡಿಯೂರಪ್ಪ ರಾಜಕೀಯ ಜೀವನದಿಂದ ನಿವೃತ್ತಿಯಾಗಬೇಕಿತ್ತು. ಅವರಿಗೆ ರಾಜಕೀಯ ನಿವೃತ್ತರಾಗಲು ಹೇಳಿ ಎಂದು ವಾಗ್ದಾಳಿ ನಡೆಸಿದರು.
ಮೈಸೂರು ಸಮಾವೇಶದಲ್ಲಿ ಬಿಜೆಪಿ ಹಗರಣಗಳನ್ನು ಬಿಚ್ಚಿಡ್ತೇನೆ. ಬಿಜೆಪಿ, ಜೆಡಿಎಸ್ ಸರ್ಕಾರದ ಎಲ್ಲಾ ಹಗರಣಗಳನ್ನು ಬಿಚ್ಚಿಡ್ತೇನೆ. ಜೆಡಿಎಸ್, ಬಿಜೆಪಿಯವರು ಯಾವ ಹಗರಣಗಳನ್ನು ಮಾಡಿದ್ದಾರೆ. ಎಲ್ಲವನ್ನೂ ಸಂಪೂರ್ಣವಾಗಿ ಸಮಾವೇಶದಲ್ಲಿ ತೆರೆದಿಡುತ್ತೇನೆ. ಇದೆಲ್ಲವನ್ನೂ ಹೇಳಲು ಸುದ್ದಿಗೋಷ್ಠಿಯನ್ನು ನಾನು ಕರೆದಿದ್ದೆ. ಸಮಾವೇಶದಲ್ಲೇ ಹೇಳಬೇಕೆಂದು ಸುದ್ದಿಗೋಷ್ಠಿ ರದ್ದು ಮಾಡಿದೆ. ಬಿಜೆಪಿ ಸರ್ಕಾರದ ಹಗರಣ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದರು.