ಒಕ್ಕಲಿಗ ಸ್ವಾಮೀಜಿ ಹೇಳಿಕೆಯಿಂದಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಪರ-ವಿರೋಧ ಚರ್ಚೆ ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆಯೇ ಎಚ್ಚೆತ್ತಿರುವ ಅಹಿಂದ ಸಂಘಟನೆಗಳು ತಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನದ ಅಂಗವಾಗಿ ಬೃಹತ್ ಸಮಾವೇಶ ನಡೆಸುವ ಮೂಲಕ ‘ಅಹಿಂದ’ ಶಕ್ತಿ ಪ್ರದರ್ಶನಕ್ಕೆ ಸದ್ದಿಲ್ಲದೆ ಸಿದ್ದತೆ ನಡೆಸಿವೆ.
ರಾಜ್ಯದ ಮುಂಚೂಣಿ ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಪರೋಕ್ಷ ಸಂದೇಶ ರವಾನಿಸುವ ಗುರಿಯೊಂದಿಗೆ 4 ಲಕ್ಷ ಜನರನ್ನು ಸೇರಿಸಿ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ ಎನ್ನಲಾಗಿದ್ದು ಅಹಿಂದ ಸಮಾವೇಶದ ರೂಪುರೇಷೆ ಈಗಾಗಲೇ ಸಿದ್ಧವಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಬದಲಿಸಿ ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರನು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆನ್ನುವ ಕೂಗು ಹೊಸದೇನಲ್ಲ. ಆದರೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಪೀಠದ ಚಂದ್ರಶೇಖರನಾಥ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಎದುರೇ ಮುಖ್ಯಮಂತ್ರಿ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡಿದ್ದರು. ಈ ಬಳಿಕ ಕೆಲ ದಿನಗಳಿಂದ ಪರ-ವಿರೋಧ ಚರ್ಚೆ ತಾರಕಕ್ಕೇರಿದೆ. ಈ ಗದ್ದಲದ ನಡುವೆಯೇ ಇದೀಗ ಸಿದ್ದರಾಮಯ್ಯ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಅವರ ಪರ ಶಕ್ತಿ ಪ್ರದರ್ಶನ ನಡೆಸಲು ಅಹಿಂದ ಸಂಘಟನೆ ಸಿದ್ಧತೆ ಆರಂಭಿಸಿದೆ.
ಹುಬ್ಬಳ್ಳಿಯಲ್ಲಿ ಆಗಸ್ಟ್ನಲ್ಲಿ ಸಮಾವೇಶ ಆಯೋಜಿಸಲು ಅಹಿಂದ ಸಂಘಟನೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅದರ 76ನೇ ಜನ್ಮದಿನದ ಅಂಗವಾಗಿ ‘ಸಿದ್ದರಾಮಯ್ಯ ಅಹಿಂದ ರತ್ನ’ ಎಂಬ ಹೆಸರಿನಡಿ 76 ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡುವುದು, ಬರೊಬ್ಬರಿ 100 ಕೆ.ಜಿ. ತೂಕದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸುವುದು, ರಾಜ್ಯದ ವಿವಿಧ ಜಿಲ್ಲೆಗಳಿಂದ 3-4 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಅಹಿಂದ ಸಂಘಟನೆ ಯೋಜನೆ ಹಾಕಿಕೊಂಡಿದೆ.ಇದಕ್ಕಾಗಿ ಈಗಾಗಲೇ ಪ್ರಶಸ್ತಿ ಆಯ್ಕೆ ಸಮಿತಿ, ಸ್ವಾಗತ ಸಮಿತಿ ಸೇರಿ ಕೆಲವೊಂದಿಷ್ಟು ಸಮಿತಿ ರಚಿಸಲಾಗಿದೆ. ಎಲ್ಲ ಜಿಲ್ಲೆಗಳ ಅಹಿಂದ ಅಧ್ಯಕ್ಷರು ಸೇರಿ ಪ್ರಮುಖರ ನಿಯೋಗ ಇನ್ನೆರಡು ದಿನಗಳಲ್ಲಿ ಸಿಎಂ ಅವರನ್ನು ಭೇಟಿಯಾಗಿ ಕಾರ್ಯಕ್ರಮದ ಸಮಯ ಹಾಗೂ ದಿನಾಂಕ ನಿಗದಿಪಡಿಸಿಕೊಂಡು ಬರಲಿದೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಎರಡು ಬಾರಿ ಸಭೆಗಳನ್ನು ನಡೆಸಲಾಗಿದೆ.