ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ʻಮನೆ ಮನೆಗೆ ಗ್ಯಾರಂಟಿ ಯೋಜನೆ’ಯು ಮತದಾರರಿಗೆ ನೀಡಿದ ಲಂಚವಾಗಿದ್ದು, ಚುನಾವಣೆಯಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್ನ ಎಲ್ಲ 99 ಸಂಸದರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಇದನ್ನು ತಡೆಯುವಲ್ಲಿ ಸಾರ್ವಜನಿಕ ಚುನಾವಣಾ ಆಯೋಗ ವಿಫಲವಾಗಿದೆ ಎಂದೂ ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿದೆ. ಕಳೆದ ಮೇ 2ರಂದು ಚುನಾವಣಾ ಆಯೋಗ ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಉಚಿತ ಕೊಡುಗೆಯನ್ನು ನಿಯಂತ್ರಣ ಮಾಡುವಂತೆ ಇದರಲ್ಲಿ ಹೇಳಲಾಗಿತ್ತು.
ಆದರೆ ಕಾಂಗ್ರೆಸ್ ಇದನ್ನು ಲೆಕ್ಕಿಸದೇ ಮನೆ ಮನೆಗೆ ಗ್ಯಾರಂಟಿ ಕಾರ್ಡ್ಗಳನ್ನು ಹಂಚಿಕೆ ಮಾಡಿದೆ. ತಾವು ಅಧಿಕಾರಕ್ಕೆ ಬಂದರೆ ಅನೇಕ ಆರ್ಥಿಕ ಲಾಭಗಳನ್ನು ಜನರಿಗೆ ನೀಡುವುದು ಸಹಿತ ಹಲವು ಉಚಿತ ಕೊಡುಗೆಗಳ ಬಗ್ಗೆ ಈ ಕಾರ್ಡ್ಗಳಲ್ಲಿ ಉಲ್ಲೇಖ ಇದೆ. ಇಂಥ ಕೊಡುಗೆಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ಚುನಾವಣೆ ಪ್ರಚಾರ ನಡೆಸಿದೆ. ಗ್ಯಾರಂಟಿ ಆಧಾರದಲ್ಲೇ ಕಾಂಗ್ರೆಸ್ನ 99 ಸಂಸದರು ಆಯ್ಕೆ ಆಗಿದ್ದಾರೆ. ಜನರಿಗೆ ಆಮಿಷ, ಲಂಚ ನೀಡಿ ಅವರು ಚುನಾವಣೆ ಗೆದ್ದಿದ್ದಾರೆ. ಹೀಗಾಗಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು. ಕಾಂಗ್ರೆಸ್ಗೆ ನೀಡಿರುವ ರಾಜಕೀಯ ಪಕ್ಷದ ಸ್ಥಾನವನ್ನೂ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.