ಬೆಂಗಳೂರು: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣಾ ಸಭೆಯನ್ನು ಸಚಿವ ಸಂಪುಟ ಸದಸ್ಯರು ಹಾಗೂ ಹಿರಿಯ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದರು. ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ, 1924 ರಲ್ಲಿ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಕುರಿತು ಸಿಎಂ ಸಿದ್ದರಾಮಯ್ಯ ಅವರು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಚಿವ ಸಂಪುಟದ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ, ಸಚಿವರಾದ ಹೆಚ್.ಕೆ.ಪಾಟೀಲ್, ಜಮೀರ್ ಅಹಮದ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ, ಮಧು ಬಂಗಾರಪ್ಪ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ರಮಾನಾಥ್ ರೈ, ಬಿ.ಎಲ್.ಶಂಕರ್, ಶಾಸಕರಾದ ಆಸಿಫ್ ಸೇಠ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿಯವರಾದ ಕಾವೇರಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಗಾಂಧಿ ಭವನದ ಪದಾಧಿಕಾರಿಗಳು , ಬೆಳಗಾವಿ ಜಿಲ್ಲಾಡಳಿತದ ಅಧಿಕಾರಿಗಳು ಸೇರಿ 60 ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ನಡೆದ ಸಮಿತಿ ಸಭೆಯ ನಿರ್ಣಯಗಳು.
• ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಡಿಸೆಂಬರ್ 26 ಮತ್ತು 27ರಂದು ಕಾರ್ಯಕ್ರಮಗಳಿಗೆ ಚಾಲನೆ.
• ಶತಮಾನೋತ್ಸವ ಅಂಗವಾಗಿ ವರ್ಷವಿಡೀ ʻಗಾಂಧೀ ಭಾರತʼ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಅವರಿಂದ ಸೂಚನೆ.
• ಬೆಳಗಾವಿಯಲ್ಲಿ ಡಿ.26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮತ್ತು ಡಿ.27ರಂದು ಸಾರ್ವಜನಿಕ ಸಭೆ ನಡೆಸಲು ನಿರ್ಧಾರ.
• ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ನಗರದ ಪ್ರಮುಖ 32 ಕಿಮೀ ಉದ್ದದ ರಸ್ತೆ ಹಾಗೂ 30 ವೃತ್ತಗಳ ದೀಪಾಲಂಕಾರ.
• ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿ ವೀರಸೌಧ ಅಭಿವೃದ್ಧಿ. ಈ ಸ್ಥಳದಲ್ಲಿ ಗ್ರಂಥಾಲಯ ಮತ್ತು ಗಾಂಧಿ ಪ್ರತಿಮೆ ಅನಾವರಣ.
• ಬೆಳಗಾವಿಯ 2.1 ಕಿ.ಮೀ ಉದ್ದದ ಕಾಂಗ್ರೆಸ್ ರಸ್ತೆಯಲ್ಲಿ ಶತಮಾನೋತ್ಸವದ ಸ್ಮಾರಕವಾಗಿ ತಾತ್ಕಾಲಿಕ ವಿರೂಪಾಕ್ಷ ಗೋಪುರ ನಿರ್ಮಾಣ, ರೈಲು ಮಾರ್ಗದ ತಡೆಗೋಡೆಯುದ್ದಕ್ಕೂ ಉಬ್ಬು ಶಿಲ್ಪಗಳ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧಾರ.
• ಕಣಬರಗಿಯಲ್ಲಿ ಗಂಗಾಧರ ರಾವ್ ದೇಶಪಾಂಡೆಯವರ ಸ್ಮಾರಕದಲ್ಲಿ ಮೂರ್ತಿ ಸ್ಥಾಪನೆ, ಮ್ಯೂಸಿಯಂ ಉದ್ಘಾಟನೆ. ಹುದಲಿಯಲ್ಲಿ ಗಾಂಧೀ ಸ್ಮಾರಕ ಹಾಗೂ ಛಾಯಾಚಿತ್ರ ಗ್ಯಾಲರಿಯ ಅಭಿವೃದ್ಧಿ.
• ಗಾಂಧೀಜಿ ಅವರು ವಿವಿಧ ಕಾಲಘಟ್ಟಗಳಲ್ಲಿ ಭೇಟಿ ನೀಡಿದ ರಾಜ್ಯದ 120 ಸ್ಥಳಗಳಲ್ಲಿ ನೆನಪಿನ ಸ್ತಂಭಗಳನ್ನು ನಿರ್ಮಿಸಲು ತೀರ್ಮಾನ.
• ಅಟನ್ ಬರೋ ನಿರ್ಮಿಸಿದ ಪ್ರಸಿದ್ಧ ʻಗಾಂಧಿʼ ಸಿನೆಮಾವನ್ನು ಕನ್ನಡದಲ್ಲಿ ನಿರ್ಮಿಸಲು ನಿರ್ಧಾರ.
• ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿವೇಶನ, ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಗ್ಯಾಲರಿ ನಿರ್ಮಾಣ.
• ಡಿ.26 ರಂದು ಗಣ್ಯ ಪ್ರತಿನಿಧಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಿ.27 ರಂದು ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ.
• ಶತಮಾನೋತ್ಸವದ ನೆನಪಿಗೆ ವಿಶೇಷ ಅಂಚೆ ಚೀಟಿ ಬಿಡುಗಡೆಗೆ ನಿರ್ಧಾರ.