ಇಂದು ಸಂಸತ್ನಲ್ಲಿ ಭಾರೀ ಹೈಡ್ರಾಮವೇ ನಡೆದಿದೆ. ಕೇಂದ್ರ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ವಿರುದ್ದದ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ಕೈಗೊಂಡಿತ್ತು. ಈ ವೇಳೆ ಭಾರತೀಯ ಜನತಾ ಪಕ್ಷದ ಸಂಸದ ಪ್ರತಾಪ್ ಸಾರಂಗಿ ತಲೆಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾರೆ. ಸಂಸತ್ ಭವನದ ಎದುರು ರಾಹುಲ್ ಗಾಂಧಿ ಸಂಸದರನ್ನು ತಳ್ಳಿದ್ದರು. ಈ ವೇಳೆ ಸಂಸದನೊಬ್ಬ ನನ್ನ ಮೇಲೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಬಿಜೆಪಿ ಸಂಸದ ಹೇಳಿಕೊಂಡಿದ್ದಾರೆ.
ಸದ್ಯ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಎಫ್ಐಆರ್ ದಾಖಲಾಗಿದೆ. ಪ್ರತಿಭಟನೆಯ ವೇಳೆ ನಾನು ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ವೇಳೆ ರಾಹುಲ್ ಗಾಂಧಿ ಸಂಸದರೊಬ್ಬರನ್ನು ತಳ್ಳಿದ್ದಾರೆ. ಆ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ನಾನು ಉರುಳಿಬಿದ್ದೆ ಎಂದು ಸಾರಂಗಿ ಆರೋಪ ಮಾಡಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದ್ದರಿಂದ ಸಂಸದ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಪ್ರತಾಪ್ ಸಾರಂಗಿ ಅವರ ಆರೋಗ್ಯ ವಿಚಾರಿಸಲು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಿಂದ ಬಂದ ನಂತರ, ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಇಬ್ಬರೂ ಐಸಿಯುನಲ್ಲಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ. ಇಬ್ಬರಿಗೂ ಸಾಕಷ್ಟು ರಕ್ತ ಹೋಗಿದೆ. ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.