ಈ ಬಜೆಟ್ನಲ್ಲೂ ಕಾಂಗ್ರೆಸ್ ಸರ್ಕಾರ 1 ಲಕ್ಷ ಕೋಟಿ ರೂ. ನಷ್ಟು ಸಾಲ ಮಾಡಲಿದೆ. ಕೇರಳದಂತೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ ಕೊಂಡೊಯ್ಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದಾಯದಲ್ಲಿ ಶೇ.20 ರಷ್ಟು ಇಳಿಕೆಯಾಗಿದೆ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಯೇ ಹೇಳಿದ್ದಾರೆ. ಈ ಬಜೆಟ್ನಲ್ಲಿ 1 ಲಕ್ಷ ಕೋಟಿ ರೂ. ನಷ್ಟು ಸಾಲ ಮಾಡಲು ಸರ್ಕಾರ ಮುಂದಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಲ ಪಡೆಯದೆ ಹೆಚ್ಚುವರಿ ಬಜೆಟ್ ಮಾಡಲಾಗಿತ್ತು.
ಕಾಂಗ್ರೆಸ್ ಬಂದ ನಂತರ ಕರ್ನಾಟಕ ಸಾಲ ರಾಜ್ಯವಾಗಿ ಪರಿವರ್ತನೆಯಾಗಿದೆ. ಕೇರಳದಂತೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ರಾಜ್ಯವನ್ನು ತರಲಿದ್ದಾರೆ. ಸಿದ್ದರಾಮಯ್ಯ ಹೊರ ನಡೆಯುವ ಮುಖ್ಯಮಂತ್ರಿಯಾಗಿರುವುದರಿಂದ ಅವರಿಗೆ ಯಾವುದೇ ಚಿಂತೆ ಇಲ್ಲ. ಕೆಲವು ಶಾಸಕರು ಅನುದಾನವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಭೆಯಲ್ಲೇ ಈ ಕುರಿತು ಜಗಳ ನಡೆದಿದೆ ಎಂದರು.
ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಸ್ವತಃ ಕಾಂಗ್ರೆಸ್ ಶಾಸಕರೇ ಅದನ್ನು ಹೇಳಿದ್ದಾರೆ. ಇದರ ಜೊತೆಗೆ ಬ್ಯಾಂಕ್ ದರೋಡೆ, ಹಸುವಿನ ಕೆಚ್ಚಲು ಕತ್ತರಿಸುವುದು, ಅತ್ಯಾಚಾರ ಮೊದಲಾದ ಅಪರಾಧಿ ಚಟುವಟಿಕೆಗಳು ನಡೆಯುತ್ತಲೇ ಇವೆ.
ಇಷ್ಟೆಲ್ಲ ಆದರೂ ಬೆಳಗಾವಿಯಲ್ಲಿ ಸಮಾವೇಶ ನಡೆಸಲು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡುತ್ತದೆ. ಭ್ರಷ್ಟಾಚಾರದಿಂದ ವಸೂಲಿ ಮಾಡಿದ ಹಣವನ್ನು ಆ ಸಮಾವೇಶಕ್ಕೆ ಬಳಸಲಾಗಿದೆ. ಈಗ ದರ ಏರಿಕೆ ಮಾಡಿ ಜನರ ಮೇಲೆ ಮತ್ತಷ್ಟು ಹೊರೆ ಹೇರಿದ್ದಾರೆ. ಮೊದಲಿಗೆ ಯಾವುದೇ ತೆರಿಗೆ ಹೇರಲ್ಲ ಎಂದು ಹೇಳಿ, ಬಳಿಕ ಜನರ ತಲೆ ಮೇಲೆ ಹೊರೆ ಹಾಕಿದ್ದಾರೆ ಎಂದು ದೂರಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc