“ಪ್ರಧಾನಮಂತ್ರಿಗಳು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಈಡೇರಿಸುವುದೇ ಕಾಂಗ್ರೆಸ್ ಗುರಿ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳಿಂದ ಯಾವತ್ತೂ ಹಿಂದೆ ಸರಿದಿಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆ ಬಗ್ಗೆ ಕೇಳಿದಾಗ, “ನಮ್ಮ ಐದೂ ಗ್ಯಾರಂಟಿಗಳು ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸುತ್ತಿವೆ. ಇದು ಮಾನ್ಯ ಪ್ರಧಾನಮಂತ್ರಿಗಳಿಗೂ ಗೊತ್ತಿದೆ. ಕರ್ನಾಟಕದ ಈ ಮಾದರಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಡ್ಡಾಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರವು ಈ ಯೋಜನೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ ಎಂಬುದನ್ನು ಪ್ರಧಾನಮಂತ್ರಿಗಳು ಅರ್ಥ ಮಾಡಿಕೊಳ್ಳಲಿದ್ದಾರೆ” ಎಂದು ತಿಳಿಸಿದರು.
ಚುನಾವಣೆಯಲ್ಲಿ ಎನ್ಡಿಎ ಈ ವಿಚಾರ ಬಳಸಬಹುದು ಎಂದು ಕೇಳಿದಾಗ, “ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಹತ್ತಿರದಲ್ಲಿದ್ದು, ಜನರ ಗಮನ ಬೇರೆ ವಿಷಯದ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಧ್ಯಕ್ಷರು. ಅವರು ಆಗಾಗ್ಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿರುತ್ತಾರೆ. ಈ ಐದು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ.
ಈ ಯೋಜನೆಗಳ ಲೋಪದೋಷಗಳನ್ನು ಸರಿಪಡಿಸಲು ಕೆಲವರು ಸಲಹೆ ಕೊಟ್ಟಿರಬಹುದು. ಇದನ್ನು ಪರಿಗಣಿಸಬೇಕೇ, ಬೇಡವೇ ಎಂಬುದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ವಿರೋಧ ಪಕ್ಷಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅವರು ಸಾಧ್ಯವಾದರೆ ಬೆಂಬಲ ನೀಡಲಿ. ಇಲ್ಲದಿದ್ದರೆ ನೇರವಾಗಿ ವಿರೋಧ ಮಾಡಲಿ. ಕೊಂಕು ಮಾತುಗಳನ್ನು ಆಡುವುದನ್ನು ನಿಲ್ಲಿಸಲಿ” ಎಂದು ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆ ಬಗ್ಗೆ ಡಿಸಿಎಂ ಹಾಗೂ ಖರ್ಗೆ ಅವರ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆಯೇ ಎಂದು ಕೇಳಿದಾಗ, “ಈ ಗ್ಯಾರಂಟಿ ಯೋಜನೆಯಲ್ಲಿ ಆದಾಯ ತೆರಿಗೆ, ಜಿಎಸ್ ಟಿ ಪಾವತಿದಾರರು, ಸರ್ಕಾರಿ ಅಧಿಕಾರಿಗಳು ಫಲಾನುಭವಿಗಳಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಚಾರವಾಗಿ ಶಾಸಕರುಗಳಿಗೆ ದೂರು ಬರುತ್ತವೆ. ಅವಶ್ಯಕತೆ ಇರುವವರಿಗೆ ಮಾತ್ರ ಈ ಯೋಜನೆ ಸಿಗಲಿ ಎಂದು ಹೇಳುತ್ತಾರೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಕೊಡಿ, ಹಣ ಬೇಡ ಎನ್ನುತ್ತಾರೆ.
ಹೀಗಾಗಿ ಈ ಯೋಜನೆಯ ಅನುಕೂಲ ಪಡೆಯುತ್ತಿರುವವರನ್ನು ಗುರುತಿಸಬೇಕು. ಯೋಜನೆ ಲಾಭ ಸಿಗದ ಅರ್ಹರನ್ನು ಇನ್ನು ಪರಿಣಾಮಕಾರಿಯಾಗಿ ಗುರುತಿಸಬೇಕು. ಇದು ಯೋಜನೆಯ ಪರಿಷ್ಕರಣೆಯಲ್ಲ. ಉದಾಹರಣೆಗೆ ರಾಮನಗರ ಜಿಲ್ಲೆಯಲ್ಲಿ ಶೇ 92 ರಷ್ಟು ಜನರಿಗೆ ಈ ಯೋಜನೆ ಲಾಭ ಸಿಗುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತಾರು ಸಾವಿರ ಮನೆಗಳಿಗೆ ಯೋಜನೆ ಸಿಕ್ಕಿರಲಿಲ್ಲ. ನಾವು ನಮ್ಮ ಕಾರ್ಯಕರ್ತರು, ಮುಖಂಡರನ್ನು ಬಿಟ್ಟು, ವಂಚಿತರಿಗೆ ಯೋಜನೆ ಸಿಗುವಂತೆ ಮಾಡಿದ್ದೆವು” ಎಂದು ತಿಳಿಸಿದರು.