ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ಚನ್ನಪಟ್ಟಣ ಕ್ಷೇತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಎಂಎಲ್ಸಿ, ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕೈ ಟಿಕೆಟ್ ಇವರಿಗೆ ನೀಡುವುದು ಖಚಿತವಾಗಿದೆ. ಇನ್ನು ಸಿಪಿ ಯೋಗೇಶ್ವರ್ ಅವರ ರಾಜಕೀಯ ಹಾದಿಯೇ ವರ್ಣ ರಂಜಿತವಾಗಿದೆ. ಸಿ.ಪಿ ಯೋಗೇಶ್ವರ್ ಏಂಟು ಚುನಾವಣೆಗಳನ್ನು ಎದುರಿಸಿದ್ದು, 5 ಬಾರಿ ಗೆಲವು ಸಾಧಿಸಿದ್ದಾರೆ. ಅದರಲ್ಲಿ 4 ಬಾರಿ ಬೇರೆ ಬೇರೆ ಚಿಹ್ನೆಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಸೈನಿಕ ಚಿತ್ರದಲ್ಲಿ ನಾಯಕನಾಗಿ ನಟಿಸಿ ಖ್ಯಾತಿ ಗಳಿಸಿರುವ ಸಿಪಿ ಯೋಗೇಶ್ವರ್ ಅವರು 1999ರಲ್ಲಿ ಚುನಾವಣಾ ರಾಜಕಾರಣಕ್ಕೆ ದುಮುಕಿದರು. 1999ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್ನ ಕಾಂತ ಸಾದತ್ ಅಲಿ ಖಾನ್ ಅವರನ್ನು 2282 ಮತಗಳ ಅಂತರದಿಂದ ಸೋಲಿಸಿದರು.
ಇದನ್ನೂ ಓದಿ: ಕಟ್ಟಡ ಕುಸಿತ: ಮಾಲೀಕ, ಮಗನ ವಿರುದ್ಧ FIR ದಾಖಲು!
ನಂತರ ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ನ ಅಶ್ವಥ್ ಎಮ್ಸಿ ಅವರನ್ನು ಸೋಲಿಸಿ 16,169 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಮತ್ತೆ 2008ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದರು. ಆಗಲೂ ಜೆಡಿಎಸ್ ಅಭ್ಯರ್ಥಿಯನ್ನು 4,930 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯಪತಾಕೆ ಹಾರಿಸಿದರು.
ನಂತರ 2009ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಜೆಡಿಎಸ್ನ ಅಶ್ವತ್ಥ್ ಎಮ್ಸಿ ಅವರ ವಿರುದ್ಧ 2282 ಮತಗಳ ಅಂತರದಿಂದ ಸೋಲು ಕಂಡರು. ಬಳಿಕ, 2011 ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿ, ಅಭೂತಪೂರ್ವ ಜಯಗಳಿಸಿದರು.
2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ಮತಗಳಿಂದ ಸೋಲು ಉಣಿಸಿದರು. 2018ರಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಮತ್ತೆ 2023ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ವಿರುದ್ಧ 15 ಸಾವಿರಕ್ಕೂ ಅಧಿಕ ಮತಗಳಿಂದ ಸೋಲುಂಡರು. ಇದೀಗ ಮತ್ತೆ ಕಾಂಗ್ರೆಸ್ ಸೇರಿದ್ದು, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಲೈವ್..!