ಐಪಿಎಲ್ ಮುಗಿದ ಕೆಲವೆ ಕೆಲವು ದಿನಗಳಲ್ಲಿ ಟಿ-20 ವಿಶ್ವಕಪ್ ಪ್ರಾರಂಭವಾಗಲಿದ್ದು, ಇದೇ ಜೂನ್ 2 ರಿಂದ 29 ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ನಡೆಸಿಕೊಡುತ್ತಿದ್ದಾರೆ. ಆದರೆ ಇದೀಗ ಚುಟುಕು ಕ್ರಿಕೆಟ್ ಹಬ್ಬಕ್ಕೆ ಭಯೋತ್ಪಾದಕರು ಬೆದರಿಕೆಯೊಡ್ಡಿದ್ದು, ಎಲ್ಲಡೆ ಆತಂಕ ಸೃಷ್ಟಿಯಾಗಿದೆ.
ಟೂರ್ನಿಯ ಸಂದರ್ಭದಲ್ಲಿ ದಾಳಿ ನಡೆಸುವುದಾಗಿ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಹೇಳಿಕೊಂಡಿದೆ. ಐಎಸ್ಖೋರಾಸನ್ ಈ ಬೆದರಿಕೆ ಹಿನ್ನೆಲೆ ಭದ್ರತೆ ಕಾಳಜಿವಹಿಸಲು ಟೂರ್ನಿ ಆಯೋಜಕರು ಮುಂದಾಗಿದ್ದಾರೆ. ಕೆರಿಬಿಯನ್ ಮಾಧ್ಯಮಗಳ ಮಾಹಿತಿ ಪ್ರಕಾರ, ಉತ್ತರ ಪಾಕಿಸ್ತಾನದಿಂದ ಬೆದರಿಕೆಯೊಡ್ಡಲಾಗಿದ್ದು, ಐಎಸ್ಖೋರಾಸನ್ ಉಗ್ರಗಾಮಿ ಸಂಘಟನೆ ಟೂರ್ನಿ ನಡುವೆ ಹಿಂಸಾಚಾರವನ್ನು ಪ್ರಚೋದಿಸಲು ಮುಂದಾಗಿದೆ ಎಂದು ಗುಪ್ತಚರ ವರದಿಗಳು ತಿಳಿಸಿದೆ. ಹೀಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹಾಗೂ ಯುಎಸ್ಎ ಟಿ-20 ವಿಶ್ವಕಪ್ ವೇಳೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.
1 ತಿಂಗಳ ಕಾಲ ನಡೆಯುವ ವಿಶ್ವಕಪ್ನಲ್ಲಿ ಈ ಬಾರಿ ಭಾರತ ಸೇರಿದಂತೆ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಇದು ಅತ್ಯಂತ ದೊಡ್ಡ ಟಿ20 ವಿಶ್ವಕಪ್ ಟೂರ್ನಿ ಆಗಿರಲಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟೂರ್ನಿ ಆಯೋಜಿಸಲಾಗುತ್ತಿದ್ದು, ಇಡೀ ವಿಶ್ವದ ಕಣ್ಣು ಇದರತ್ತ ನೆಟ್ಟಿದೆ. ಹೀಗಿರುವಾಗ ಈ ಬೆದರಿಕೆ ಟೂರ್ನಿಯ ಭದ್ರತೆಯ ಬಗ್ಗೆ ಆಯೋಜಕರ ಆತಂಕವನ್ನು ಹೆಚ್ಚಿಸಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಪೂರ್ಣ ಭದ್ರತೆಯೊಂದಿಗೆ ಯಶಸ್ವಿಯಾಗಿ ಟಿ-20 ವಿಶ್ವಕಪ್ ಆಯೋಜಿಸುವುದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಸಿಇಒ ಜಾನಿ ಗ್ರೇವ್ಸ್ ತಿಳಿಸಿದ್ದಾರೆ.