7 ಮದುವೆಯಾಗಿ ಅದನ್ನ ಮುಚ್ಚಿಟ್ಟು 8 ನೇ ಮದುವೆಯಾಗಿದ್ದ ಖತರ್ನಾಕ್ ಲೇಡಿ ಲಾಕ್ ಆಗಿದ್ದಾಳೆ. 8ನೇ ಗಂಟನ ಮನೆಯಲ್ಲಿ ಚಿನ್ನಾಭರಣ, ದುಡ್ಡು ಕದ್ದು ಪತಿ ವಿರುದ್ದವೇ ಸುಳ್ಳು ಕೇಸ್ ದಾಖಲಿಸಿ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಮಹಿಳೆ ಸೇರಿದಂತೆ 4 ಜನರ ವಿರುದ್ದ ಬಸವೇಶ್ವರನಗರ ಠಾಣೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಮಹಾಗಣಪತಿ ನಗರ ನಿವಾಸಿ ರಾಮ ಕೃಷ್ಣ ಎಂಬುವವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರು ಟೌನ್ನ ಎಚ್.ಎಂ.ವಿಜಯಲಕ್ಷ್ಮಿ ನಂದೀಶ, ಮಂಡ್ಯದ ರೇಖಾ ಮತ್ತು ವನಜಾ ಎಂಬುವವರ ವಿರುದ್ದ ಬಿಎನ್ಎಸ್ ಕಲಂ 314, 316(2), 318(4), 351(2), 351(3), 61(2), 82(1), 82(2), 83, 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಏನಿದು ಪ್ರಕರಣ ?
ದೂರುದಾರ ರಾಮಕೃಷ್ಣ ಅವರ ಪತ್ನಿ ಸಾವನ್ನಪ್ಪಿದ್ದರು. ರಾಮಕೃಷ್ಣ ಅವರಿಗೆ 2020 ರ ನವೆಂಬರ್ನಲ್ಲಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಎಚ್.ಎಂ. ವಿಜಯಲಕ್ಷ್ಮೀ ಅವರ ಪರಿಚಯವಾಗಿದೆ. ಬಳಿಕ ರಾಮನಗರದ ತಿಪ್ಪೇಗೌಡನ ದೊಡ್ಡಿಯ ರಾಮದೇವರ ಬೆಟ್ಟದ ರಾಮಾಂಜನೇಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಗುರು-ಹಿರಿಯರ ಸಮ್ಮುಖದಲ್ಲಿ ವಿಜಯಲಕ್ಷ್ಮೀಯನ್ನ ರಾಮಕೃಷ್ಣ ಅವರು ಎರಡನೇ ಮದುವೆಯಾಗಿದ್ದಾರೆ.
ಪಿಎಫ್ ಹಣಕ್ಕೆ ಬೇಡಿಕೆ:
ಈ ಮದುವೆಗೂ ಮುನ್ನ ವಿಜಯಲಕ್ಷ್ಮೀ ಅವರು ಈ ಹಿಂದೆ ನನಗೆ ಮದುವೆಯಾಗಿದ್ದು, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ರಾಮಕೃಷ್ಣಗೆ ಹೇಳಿದ್ದಾರೆ. ಬಳಿಕ ರಾಮಕೃಷ್ಣ ಅವರನ್ನು ಮದುವೆಯಾದ ಕೆಲ ದಿನಗಳ ನಂತರ ರಾಮಕೃಷ್ಣ ಅವರ ಪಿಎಫ್ ಹಣ ಕಬಳಿಸುವ ಉದ್ದೇಶದಿಂದ ವಿನಾಕಾರಣ ಮನೆಯಲ್ಲಿ ಜಗಳ ತೆಗೆಯುತ್ತಿದ್ದರು. ಪಿಎಫ್ ಹಣ ಕೊಡುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏಳು ಮದುವೆ ಆಗಿದ್ದ ಐನಾತಿ!:
ವಿಜಯಲಕ್ಷ್ಮೀ ಈ ಹಿಂದೆ ತಾನು ಏಳು ಮದುವೆಯಾಗಿರುವ ವಿಚಾರವನ್ನು ರಾಮಕೃಷ್ಣ ಬಳಿ ಮುಚ್ಚಿಟ್ಟಿದ್ದಾರೆ. ಮದುವೆ ಆದ ವ್ಯಕ್ತಿಗಳ ಗಮನಕ್ಕೆ ಬಾರದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಾಸ್ ಕೊಡುವಂತೆ ಅವರು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರೆ. ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ಗಳನ್ನೂ ಸಹ ದಾಖಲಿಸಿದ್ದಾರೆ.
ಮನೆಯಲ್ಲೇ ಪಾರ್ಟಿ:
ರಾಮಕೃಷ್ಣ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಂದೀಶ್, ವನಜಾ, ರೇಖಾ ಅವರನ್ನು ಮನೆಗೆ ಕರೆಸಿಕೊಂಡು ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆ, ನೇಣು ಹಾಕಿಕೊಳ್ಳುವುದಾಗಿ ವಿಜಯಲಕ್ಷ್ಮೀ ಬೆದರಿಸಿದ್ದಾರೆ. ಅಂತೆಯೇ ರಾಮಕೃಷ್ಣ ಅವರ ಮೊದಲ ಪತ್ನಿಯ ಮಗಳು ಹಾಗೂ ಅಳಿಯನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಗದು, ಚಿನ್ನಾಭರಣ ಕಳವು:
ರಾಮಕೃಷ್ಣ ಅವರ ಅರಿವಿಗೆ ಬಾರದಂತೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಮತ್ತು ₹25 ಲಕ್ಷನಗದು ಕಳವು ಮಾಡಿದ್ದಾರೆ. ವಿಜಯಲಕ್ಷ್ಮೀ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಹೇಳಿ ರಾಮಕೃಷ್ಣ ಅವರನ್ನು ಮದುವೆಯಾಗಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಬಳಿಕ ರಾಮಕೃಷ್ಣ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.