ಪ್ರೀತಿಸಿ ಮದುವೆಯಾದ್ರೂ ಕಮ್ಮಿಯಾಗದ ಪರ ಪುರುಷನ ಮೇಲೆ ವ್ಯಾಮೋಹ. ಮದುವೆಯಾಗಿ 18 ವರ್ಷದ ಬಳಿಕ ಗಂಡ, ಮಕ್ಕಳನ್ನ ಬಿಟ್ಟು ಮಾಧವಿ ಎಂಬ ಮಹಿಳೆ ಹೊಸಹಳ್ಳಿ ಗ್ರಾಮದ ಆನಂದ್ ಕುಮಾರ್ ಎಂಬ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ. ಮನನೊಂದ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವರಾಜ್ ಮೃತ ದುರ್ದೈವಿ ಗಂಡ ಎಂದು ತಿಳಿದುಬಂದಿದೆ.
ಮಾಧವಿಯನ್ನು 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದೇವರಾಜ್ ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಆದರೆ ಈ ಘಟನೆಯಿಂದ ಮಕ್ಕಳು ತಬ್ಬಲಿಗಳಾಗಿದ್ದಾರೆ. ಪ್ರತಿ ನಿತ್ಯ ಅಂಗಡಿಯ ಬಳಿ ಬರುತ್ತಿದ್ದ ಆನಂದ್ ಕುಮಾರ್ ಮಾಧವಿಯೊಂದಿಗೆ ಸಲುಗೆ ಬೆಳೆಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಮೂರು ತಿಂಗಳ ಹಿಂದೆ ಗಂಡ ಮನೆ, ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ ಮಾಧವಿ. ಹೆಂಡತಿ ಓಡಿ ಹೋಗಿದ್ದಕ್ಕೆ ಮನನೊಂದು ದೇವರಾಜ್ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಡೆತ್ ನೋಟ್ನಲ್ಲಿ ನನಗೆ ಆನಂದ್ ಧಮ್ಕಿ ಹಾಕಿದ್ದ, ಜೀವ ಬೆದರಿಕೆ ಹಾಕಿದ್ದ ಎಂದು ಆನಂದ್ ಮತ್ತು ಹೆಂಡತಿಯ ಹೆಸರು ಬರೆದಿಟ್ಟು ಇಬ್ಬರಿಗೂ ಶಿಕ್ಷೆ ಕೊಡಿಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕುಮಾರಸ್ವಾಮಿ, ಮೋದಿ ಸೇರಿದಂತೆ ಹಲವರಿಗೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾಧವಿ, ಆನಂದ್ ವಿರುದ್ದ ಪ್ರಕರಣ ದಾಖಲಾಗಿದೆ. ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡ ಮಾಧವಿ, ಆನಂದ್ ಗೆ ಪೊಲೀಸರು ಬಲೆ ಬೀಸಿದ್ದಾರೆ.