ವಿಧಾನ ಪರಿಷತ್ತಿನಲ್ಲಿ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳರ್ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಖಾಸಗಿ ಚಾನಲ್ನಲ್ಲಿ ದಾಖಲೆ ಇದೆ ಎಂದು ಹೇಳಿಕೆ ಬಂದಿದ್ದು ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸದನ ಮುಂದೂಡುತ್ತಿದ್ದಂತೆಯೇ ನಮ್ಮ ಚಾನಲ್ಗಳು ಒಂದು ಸೆಕೆಂಡನಲ್ಲಿ ಬಂದ್ ಆಗುತ್ತವೆ. ನಾನು ಮತ್ತು ನಮ್ಮ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಸೇರಿ ಪರಿಶೀಲನೆ ನಡೆಸಿದ್ದೇವೆ. ಅಶ್ಲೀಲ ಪದ ಬಳಕೆ ಆಗಿರುವುದು ನಮ್ಮ ಚಾನಲ್ಗಳಲ್ಲಿ ದಾಖಲಾಗಿಲ್ಲ ಎಂದರು.
ಬೇರೆ ಚಾನಲ್ ಗಳನ್ನು ನಾವು ನೋಡಿಲ್ಲ. ಈಗ ಖಾಸಗಿ ಚಾನಲ್ನಲ್ಲಿ ದಾಖಲೆ ಇದೆ ಎಂದು ಹೇಳಿದ್ದಾರೆ. ದಾಖಲೆ ಕೊಟ್ಟರೆ ನಮ್ಮದೆ ನಿಯಮಗಳನ್ನು ಅನುಸರಿಸಿ ಪರಿಶೀಲಿಸಲಾಗುವುದು ಎಂದರು. ಈ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಸಮಿತಿ ವರದಿ ನೀಡುತ್ತದೆ. ಅದನ್ನು ಪರಿಶೀಲಿಸಿ ಕ್ರಮ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.