ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಕೆಟ್ಟ ಶಬ್ಧಗಳಿಂದ ನಿಂದನೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ಅವರನ್ನ ಪೊಲೀಸರು ಹೊತ್ತಿಕೊಂಡು ಹೋಗಿ ಅರೆಸ್ಟ್ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿಯನ್ನ ಅರೆಸ್ಟ್ ಮಾಡಿದ್ದಾರೆ.
ಬಲವಂತಾಗಿಯೇ ಪೊಲೀಸರು ಸುವರ್ಣಸೌಧದಿಂದ ಸಿಟಿ ರವಿ ಅವರನ್ನು ಎತ್ತಿಕೊಂಡು ಬಂದು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿಟಿ ರವಿ ಗೂಂಡಾಗಿರಿ ಮಾಡ್ತೀರೋ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ, ಆದರೆ ಪೊಲೀಸರು ಯಾವುದಕ್ಕೂ ಕೇರ್ ಮಾಡದೇ ಸಿಟಿ ರವಿಯನ್ನ ಹೊತ್ತಿಕೊಂಡು ಹೋಗಿ ತಮ್ಮ ವಾಹನದಲ್ಲಿ ಕೂರಿಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಆ ಠಾಣೆ ಬಿಟ್ಟು ಬೇರೆ ಕಡೆಗೆ ಕರೆದೊಯ್ಯಲಾಗಿದೆ. ಹಿರೇಬಾಗೇವಾಡಿ ಠಾಣೆ ದೂರುದಾರೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ಅವರ ಬೆಂಬಲಿಗರು ಆಗಮಿಸುವ ಸಾಧ್ಯತೆಗಳಿರುವ ಕಾರಣದಿಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸಿಟಿ ರವಿ ಅವರನ್ನು ಬಂಧಿಸಿ ನಂದಗಡ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.