ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಅಸಭ್ಯ ಹೇಳಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರನ್ನು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು 5ನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇವರ ಬೇಲ್ ಅರ್ಜಿ ವಿಚಾರಣೆ ನಡೆದಿದ್ದು ನ್ಯಾಯಾಲಯ ವಿಚಾರಣೆಯನ್ನ ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದೆ. ಈ ಮಧ್ಯೆ ವಿಚಾರಣೆ ವೇಳೆ ಸಿ.ಟಿ ರವಿ ತಮ್ಮ ಹಣೆಗೆ ಕಟ್ಟಿರುವ ಬ್ಯಾಂಡೇಜ್ ಬಗ್ಗೆ ನ್ಯಾಯಾಲಯದಲ್ಲಿ ಪೋಲೀಸರೇ ನನ್ನ ತಲೆಗೆ ಹೊಡೆದದ್ದು ಎಂಬ ಹೇಳಿಕೆ ನೀಡಿದ್ದಾರೆ.
ನ್ಯಾಯಾಧೀಶೆ ಡಿಸೋಜ ಅವರು ಪ್ರಕರಣದ ವಿಚಾರಣೆಯನ್ನು ನಡೆಸಿದರು. ಇದೇ ಸಮಯದಲ್ಲಿ ಸಿ.ಟಿ ರವಿ ಜಾಮೀನಿಗಾಗಿ ವಕಾಲತು ಅರ್ಜಿ ಸಲ್ಲಿಸಿದರು. ಬಳಿಕ ನ್ಯಾಯಾಧೀಶರು, ಸಿ.ಟಿ ರವಿಯನ್ನ ಯಾವಾಗ ಬಂಧನ ಮಾಡಿದರು ಎಂದು ಪ್ರಶ್ನಿಸಿದರು. ಸುವರ್ಣಸೌಧದಲ್ಲಿ ನಿನ್ನೆ ಸಂಜೆ 6:30 ರಿಂದ 6:45 ರ ಸುಮಾರಿಗೆ ನನ್ನನ್ನು ಬಂಧಿಸಿದರು ಎಂದು ಕೋರ್ಟ್ಗೆ ಸಿ.ಟಿ ರವಿ ಮಾಹಿತಿ ನೀಡಿದ್ದಾರೆ. ಅರೆಸ್ಟ್ ಮಾಡಿದ ನಂತರ ರಾತ್ರಿ 10 ಗಂಟೆಯಿಂದ ನನ್ನನ್ನು ವಾಹನದಲ್ಲಿ ಧಾರವಾಡ, ರಾಮದುರ್ಗ ಸೇರಿದಂತೆ ಹಲವಡೆ ನನ್ನನ್ನು ಸುತ್ತಾಡಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲೂ ನನ್ನನ್ನು ಸುತ್ತಾಡಿಸಿದ್ದಾರೆ. ಹೀರೆಬಾಗೇವಾಡಿಯಿಂದ ಯಾದವಾಡ, ಮುದ್ದೊಳ ಎಂಬ ಬೋರ್ಡ್ ನೋಡಿದ್ದೇನೆ. ಯಾದಗಡ್ ಎಲ್ಲ ಕಡೆ ಕರೆದುಕೊಂಡು ಹೋಗಿದ್ದಾರೆ. ಖಾನಾಪುರದಲ್ಲಿ ಪೊಲೀಸರು ನನ್ನ ತಲೆಗೆ ಹೊಡೆದ್ರು. ಆದರೆ ಅವರು ಯಾರು ಎಂದು ಗೊತ್ತಾಗಿಲ್ಲ. ರಾಮದುರ್ಗದಲ್ಲಿ ಬೆಳಗಿನ ಜಾವ 3.15ಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ಹೀಗೆ ನನಗೆ ಪೊಲೀಸರು ಮಾನಸಿಕ, ದೈಹಿಕ ಹಿಂಸೆ ನೀಡಿದ್ದು ಅಲ್ಲದೆ, ವಾಚ್ ಅನ್ನೂ ಕಿತ್ತುಕೊಂಡಿದ್ದಾರೆ. ನನಗೆ ಭಯ ಹುಟ್ಟಿಸುವಂತೆ ನಡೆದುಕೊಳ್ಳುತ್ತಿದ್ದರು.
ಪ್ರತಿ 10 ನಿಮಿಷಕ್ಕೆ ಒಂದು ಪೋನ್ ಬರುತ್ತಿತ್ತು. ಅವರ ಡೈರೆಕ್ಷನ್ ಆಧಾರದ ಮೇಲೆ ನನ್ನನ್ನು ಸುತ್ತಾಡಿಸುತ್ತಿದ್ದರು. ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದೇವೆ ಎಂಬ ಮಾಹಿತಿ ನೀಡಲಿಲ್ಲ. ನನ್ನ ಕುಟುಂಬಕ್ಕೂ ಮಾಹಿತಿ ನೀಡಿಲ್ಲ. ರಾತ್ರಿಯಿಡೀ ಹೊಟ್ಟೆ ಹಸಿವಿನಿಂದ ಉಪವಾಸ ಇದ್ದೀನಿ. ನಾನು ದೂರು ಕೊಟ್ಟೆ. ಆದರೆ ಎಫ್ಐಆರ್ ಮಾಡಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಎಫ್ಐಆರ್ ಮಾಡಿಲ್ಲ ಎಂದು ರಾತ್ರಿ ನಡೆದ ಘಟನೆ ಬಗ್ಗೆ ಕೋರ್ಟ್ಗೆ ತಿಳಿಸಿದ್ದಾರೆ ಸಿ.ಟಿ ರವಿ.