ಕೋಲಾರ: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಈ ಚಂಡಮಾರುತದ ಬಿಸಿ ರಾಜ್ಯಕ್ಕೆ ತಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈಗಾಗಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜಿಲ್ಲಾಡಳಿದಿಂದ ಮಳೆಯ ಅವಾಂತರವನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಚಂಡಮಾರುತದ ಬಿಸಿ ಇದೀಗ ರೈತರಿಗೂ ತಟ್ಟಿದೆ. ಇನ್ನು ಎಷ್ಟೋ ರೈತರು ಬೆಳೆದ ಬೆಳೆಗಳು ಹಾಳಾಗುತ್ತಿದೆ. ಈ ಮಧ್ಯೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಏರಿಕೆಯಾಗಿದೆ. ಫೆಂಗಲ್ ಚಂಡಮಾರುತ ಹಿನ್ನೆಲೆ, ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಅಭಾವ ಕಾಡುತ್ತಿದ್ದು, ಈ ಹಿನ್ನೆಲೆ ಸದ್ಯ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.
15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೋ ಬೆಲೆ 890 ರೂಪಾಯಿಗೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಾಗುತ್ತಿದೆ. ಸೋಮವಾರದಂದು 850-870 ರೂಪಾಯಿಗೆ ಹರಾಜಾಗಿದ್ದ ಟೊಮೆಟೋ, ಇಂದು ದಿಢೀರ್ ಅಂತ 890 ರೂಪಾಯಿ ಏರಿಕೆಯಾಗಿದೆ. ಕಳೆದ 3 ದಿನದಿಂದ ಟೊಮೆಟೋ ಬೆಲೆ 500 ರೂಪಾಯಿನಿಂದ 890 ರೂಗೆ ಒಮ್ಮೆಲೆ ಏರಿಕೆ ಕಂಡಿದೆ.