ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳಾದ ನಟ ದರ್ಶನ್, ಪವಿತ್ರ ಗೌಡ ಸೇರಿ 17 ಮಂದಿಯ ನ್ಯಾಯಾಂಗ ಬಂಧನವನ್ನು ಆ.14ರವರೆಗೆ ವಿಸ್ತರಿಸಿ 24ನೇ ಎಸಿಎಎಂ ನ್ಯಾಯಾಲಯ ಗುರುವಾರ ಆದೇಶಿಸಿದೆ. ನ್ಯಾಯಾಂಗ ಬಂಧನ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಗುರುವಾರ ಜೈಲಿನಿಂದಲೇ ವಿಡಿಯೊ ಕಾನ್ಸರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಲಾಯಿತು. ಈ ವೇಳೆ ಆರೋಪಿಗಳ ಹೆಸರು ಕೂಗಿ ಹಾಜರಾತಿ ದಾಖಲಿಸಿ ಕೊಂಡ ನ್ಯಾಯಾಧೀಶರು, ಬಂಧನದ ಅವಧಿಯನ್ನು ಆ.14ರ ವಿಸ್ತರಿಸಿ ಆದೇಶಿಸಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್, ಪವಿತ್ರ ಗೌಡ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 13 ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಹಾಗೂ ನಾಲ್ವರು ಆರೋಪಿಗಳನ್ನು ತುಮಕೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ. ದರ್ಶನ್ ಜೂ.22ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.