ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ ಬಳಿಕ ಡೆವಿಲ್ ಸಿನಿಮಾದ ಕೆಲಸಕ್ಕೆ ಬ್ರೇಕ್ ಬಿತ್ತು. ಹಾಗಾಗಿ ದೊಡ್ಡ ಪರದೆ ಮೇಲೆ ದರ್ಶನ್ ಅವರ ಹೊಸ ಸಿನಿಮಾ ತೆರೆಕಾಣಲಿಲ್ಲ. ಈ ಸಂದರ್ಭದಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಈ ಹಿಂದಿನ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರಲಾಗುತ್ತಿದೆ. ಕರಿಯಾ, ಪೊರ್ಕಿ ಬಳಿಕ ‘ನವಗ್ರಹ’ ಸಿನಿಮಾ ಕೂಡ ಮರು ಬಿಡುಗಡೆಗೆ ಸಿದ್ದವಾಗಿದೆ.
‘ನವಗ್ರಹ’ ಸಿನಿಮಾ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಎರಡನೇ ಸಿನಿಮಾ. ಕನ್ನಡ ಚಿತ್ರರಂಗದ ಕಳನಾಯಕರ ಪಾತ್ರ ಮಾಡುತ್ತಿದ್ದ ಕಲಾವಿಧರ ಮಕ್ಕಳೆಲ್ಲಾ ಸೇರಿ ಮಾಡಿದ್ದ ಸಿನಿಮಾ ನವಗ್ರಹ. ದರ್ಶನ್ ಜೊತೆ ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. 2008ರ ನವೆಂಬರ್ 7ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ವರ್ಷ ನವೆಂಬರ್ 8ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.