ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ಗೆ ಐಟಿ ಸಂಕಷ್ಟ ಎದುರಾಗಿದೆ. ಹೈ ಸೆಕ್ಯುರಿಟಿ ಸೆಲ್ನಿಂದ ಜೈಲು ಅಧೀಕ್ಷಕರ ಕಚೇರಿಗೆ ದರ್ಶನ್ ಕರೆತಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಲೆಕ್ಕ ಪರಿಶೋಧಕರು, ಜೈಲು ಅಧೀಕ್ಷಕಿ ಲತಾ ಸಮ್ಮುಖದಲ್ಲಿ ದರ್ಶನ್ ವಿಚಾರಣೆ ನಡೆಸಿದ್ದು, ವಿಚಾರಣೆ ಅಂತ್ಯವಾಗಿದೆ.
ಸತತ 7 ಗಂಟೆಗಳ ಕಾಲ ನಟ ದರ್ಶನ್ ಐಟಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳು ನಟ ದರ್ಶನ್ ಅವರಿಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಕ್ಷಾಂತರ ರೂಪಾಯಿ ಡೀಲ್ ಮಾಡಿಕೊಂಡಿರುವ ಕುರಿತು ಪ್ರಶ್ನೆ ಕೇಳಿದ್ದಾರೆ. ಐಟಿ ಅಧಿಕಾರಿಗಳ ವಿಚಾರಣೆ ಅಂತ್ಯವಾಗಿದ್ದು, ಬಳ್ಳಾರಿ ಜೈಲಿನಿಂದ ಎರಡು ಕಾರಿನಲ್ಲಿ ಐವರು ಅಧಿಕಾರಿಗಳು ತೆರಳಿದ್ದಾರೆ.
ಬಳ್ಳಾರಿ ಜೈಲಲ್ಲಿ ದರ್ಶನ್ ವಿಚಾರಣೆ ನಡೆಯುತ್ತಿರುವ ಈ ಸಮಯದಲ್ಲೇ ದರ್ಶನ್ಗೆ 40 ಲಕ್ಷ ಹಣ ನೀಡಿದ್ದ ಬಗ್ಗೆ ಹೇಳಿಕೆ ನೀಡಿದ್ದ ಮಾಜಿ ಉಪ ಮೇಯರ್ ಮೋಹನ್ ರಾಜ್ಗೂ ಐಟಿ ವಿಚಾರಣೆ ಎದುರಾಗುವ ಸಾಧ್ಯತೆ ಇದೆ. ಕೇವಲ ದರ್ಶನ್ ವಿಚಾರಣೆ ಮಾತ್ರವಲ್ಲದೆ ಬೆಂಗಳೂರಿನ ಆರ್.ಆರ್.ನಗರದ ದರ್ಶನ್ ನಿವಾಸ ಸೇರಿ ಆಪ್ತರ ನಿವಾಸಗಳಲ್ಲೂ ಶೋಧ ಕಾರ್ಯ ನಡೆಸುವ ಸಾಧ್ಯತೆ ಹೆಚ್ಚಾಗಿದೆ.